ಅಕೋಲಾ, ಮೇ 20, ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿರುವ ತೈಲ ಘಟಕದಲ್ಲಿ ಭಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಅದೃಷ್ಟವಶಾತ್ ಈ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅಕೋಲಾದ ಕೈಗಾರಿಕಾ ಅಭಿವೃದ್ಧಿ ನಿಗಮ (ಎಂಐಡಿಸಿ) ಪ್ರದೇಶದಲ್ಲಿರುವ ಖಾಸಗಿ ಘಟಕದಲ್ಲಿ ತಡ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದಿದೆ.ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ತಹಬಂದಿಗೆ ತಂದಿದ್ದಾರೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಬಳಕೆಯಾಗುವ ತೈಲ ತಯಾರಿಸುವ ಘಟಕ ಇದಾಗಿದೆ ಎಂದು ಹೇಳಲಾಗಿದೆ. ಅಂದಾಜು ಈ ದುರಂತದಿಂದ ಎಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿಲ್ಲ. ಆದರೆ, ಆವರಣದಲ್ಲಿ ಶೇಖರಿಸಿಡಲಾಗಿದ್ದ ತೈಲ ಮತ್ತು ಇತರ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದೆ.