ಕೆ.ಆರ್. ಪೇಟೆ, ಮಾ 30 ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಸಂದರ್ಭದಲ್ಲೇ ಇಲ್ಲಿನ ಬೊಮ್ಮೇನಹಳ್ಳಿ ಗ್ರಾಮದ ವಿಕಲಚೇತನ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ತಡೆಗಾಗಿ ಮಾಸ್ಕ್ ಒಲಿದು ಉಚಿತವಾಗಿ ಹಂಚುತ್ತಿದ್ದಾರೆ. ದುಪ್ಪಟ್ಟು ದರಕ್ಕೆ ಮಾಸ್ಕ್ ಗಳನ್ನು ಮಾರುತ್ತಿರುವ ಔಷಧಿ ಅಂಗಡಿಯವರಿಗೆ ನಾಚಿಕೆಯಾಗುವಂತಹ ಪುಣ್ಯದ ಕೆಲಸವನ್ನು ಈತ ಮಾಡುತ್ತಿರುವುದು ವರದಿಯಾಗಿದೆ.
ಬೊಮ್ಮೇನಹಳ್ಳಿ ಗ್ರಾಮದ ನಾಗರಾಜೇಗೌಡ ಮತ್ತು ಸಾಕಮ್ಮ ದಂಪತಿ ಪುತ್ರ ಮಂಜುನಾಥ್ ಅವರು ಒಂದು ಕಾಲು ಇಲ್ಲದಿದ್ದರೂ ಕೃತಕ ಕಾಲು ಜೋಡಣೆಮಾಡಿಕೊಂಡು ಕಳೆದ ೧೨ ವರ್ಷಗಳಿಂದ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ತಮ್ಮ ತಾಯಿ ಸಾಕಮ್ಮ, ಅಜ್ಜಿ ಬೋರಮ್ಮ ಅವರನ್ನು ಸಹ ಸಾಕಿ ಸಲುಹುವ ಜವಾಬ್ದಾರಿಯನ್ನು ಸಹ ಮಂಜುನಾಥ್ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಬಡತನದ ಹಿನ್ನೆಲೆಯಲ್ಲಿ ಸುಮಾರು ೨೫ ವರ್ಷಗಳ ಹಿಂದೆಯೇ ಅವರ ತಂದೆ ಮನೆ ಬಿಟ್ಟು ಹೋಗಿದ್ದರು. ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಅಗತ್ಯವಾಗಿ ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವ ಮಾಸ್ ಗಳ ಅಭಾವ ಮಾರುಕಟ್ಟೆಯಲ್ಲಿರುವುದನ್ನು ತಿಳಿದು ಪುಣ್ಯ ಕಾರ್ಯದಲ್ಲಿ ತೊಡಗಿದ್ದಾರೆ.
ಮಾಸ್ಕ್ ಗಳನ್ನು ಒಲಿದು ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುವಲ್ಲಿ ಮಗ್ನರಾಗಿದ್ದಾರೆ. ಒಂದು ವಾರದಿಂದ ಬಟ್ಟೆಯಿಂದ ಮಾಸ್ಕುಗಳನ್ನು ಹೊಲೆದು ತಮ್ಮ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆಗೆ ಉಚಿತವಾಗಿ ನೀಡುತ್ತಿದ್ದಾರೆ.ಕೆಲವರು ಇವರಿಗೆ ಸ್ವಯಂ ಪ್ರೇರಿತರಾಗಿ ಕೈಲಾದಷ್ಟು ಹಣ ನೀಡುತ್ತಿದ್ದಾರೆ. ಯಾರಿಗೂ ಬಲವಂತ ಮಾಡುತ್ತಿಲ್ಲ. ದೇಶವನ್ನು ಕಾಡುತ್ತಿರುವ ಕೊರೋನಾ ಮಹಾಮಾರಿ ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಆಗುವವರೆವಿಗೂ ನನ್ನ ಶಕ್ತಿ ಮೀರಿ ಮಾಸ್ ಗಳನ್ನು ಹೊಲೆದು ಕೊಡುತ್ತೇನೆ ಎನ್ನುತ್ತಾರೆ. ಮಂಜುನಾಥ್ ಅವರ ಪುಣ್ಯ ಕಾರ್ಯಕ್ಕೆ ಸಹಾಯ ಮಾಡಲು ಇಚ್ಚಿಸುವವರು ಮಂಜುನಾಥ್ ಅವರ ಮೊಬೈಲ್ ಸಂಖ್ಯೆ: 9632361864ಅನ್ನು ಸಂಪರ್ಕಿಸಬಹುದು. ಅಥವಾ ಮಂಜುನಾಥ್ ಅವರ ಉಳಿತಾಯ ಖಾತೆ ನಂ: 64121129759 ಐ.ಎಸ್.ಎಫ್.ಸಿ.ಕೋಡ್: SBI SBIN0040039 ಕೆ.ಆರ್.ಪೇಟೆ ಶಾಖೆ ಇಲ್ಲಿ ಹಣ ಜಮಾ ಮಾಡಬಹುದು.