ನವದೆಹಲಿ, ಅ.31: ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನ 10 ಅನುಭವಿ ಅಥ್ಲೀಟ್ ರಾಯಭಾರಿಗಳ ಪಟ್ಟಿಯಲ್ಲಿ
ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಸ್ಥಾನ ಪಡೆದಿದ್ದಾರೆ.
ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕ್ರೀಡಾ ಕಾರ್ಯ ಪಡೆಯ ಪರ ಬಾಕ್ಸರ್ ಗಳನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೆ, ಮೇರಿ ಕೋಮ್ ಕೂಟದಲ್ಲಿ ಏಷ್ಯಾದ ಕ್ರೀಡಾಪಟುಗಳನ್ನು ಪ್ರತಿನಿಧಿಸಲಿದ್ದಾರೆ.
36 ವರ್ಷದ ಬಾಕ್ಸರ್ ಮೇರಿ ಕೋಮ್ ಈ ವರ್ಷ ರಷ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳನ್ನು ಗೆದ್ದು ಬೀಗಿದ್ದರು. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮೇರಿ ಗೆದ್ದ ಎಂಟನೇ ಪದಕ ವಾಗಿದೆ. ಈ ಪಂದ್ಯಾವಳಿಯಲ್ಲಿ ಹೆಚ್ಚು ಪದಕಗಳನ್ನು ಗೆದ್ದ ಅತ್ಯಂತ ಯಶಸ್ವಿ ಬಾಕ್ಸರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಒಲಿಂಪಿಕ್ಸ್ ಕ್ರೀಡಾಕೂಟದ ಕಂಚಿನ ವಿಜೇತ ಮಾತ್ರವಲ್ಲದೆ, ಮೇರಿ ಕೋಮ್ ಐದು ಬಾರಿ ಏಷ್ಯನ್ ಚಾಂಪಿಯನ್ ಹಾಗೂ ಕಾಮನ್ ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ದೇಶಕ್ಕಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ರಾಯಭಾರಿಗಳು: ಪುರುಷರ ವಿಭಾಗದಲ್ಲಿ ಲ್ಯೂಕಾಮೊ ಲಾವಲ್ (ಆಫ್ರಿಕಾ), ಜೂಲಿಯೊ ಸೀಸರ್ ಲಾ ಕ್ರೂಜ್ (ಅಮೆರಿಕ), ಕ್ಸಿಯಾಂಗುವಾಮ್ ಆಸಿಯಾಹು (ಏಷ್ಯಾ), ವಾಸಿಲ್ ಮರ್ಡಿ (ಯುರೋಪ್), ಡೇವಿಡ್ ನಾಯ್ಕಾ (ಒಸಾನಿಯಾ), ಮತ್ತು ಮಹಿಳೆಯರಲ್ಲಿ ಖಾದಿಜಾ ಮರ್ಡಿ (ಆಫ್ರಿಕಾ) ಮೈಕೆಲಾ ಮೇಯರ್ (ಅಮೆರಿಕಾಸ್), ಎಂಸಿ ಮೇರಿಕೋಮ್ (ಏಷ್ಯಾ), ಸಾರಾ ಒರಾಹ್ಮೌನ್ (ಯುರೋಪ್), ಶೆಲ್ಲಿ ವಾಟ್ಸ್ (ಓಷಿಯಾನಿಯಾ).