ಭಗತ್‌ಸಿಂಗ್, ರಾಜ್‌ಗುರು, ಸುಖದೇವ್‌ರ ಹುತಾತ್ಮ ದಿನ ಆಚರಣೆ
ಬಳ್ಳಾರಿ 23: ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 94ನೇ ಹುತಾತ್ಮ ದಿನವನ್ನು ನಗರದ ಬಿಮ್ಸ್ ಮೈದಾನ, ಮುನ್ಸಿಪಲ್ ಮೈದಾನ ಮತ್ತು ಸೊಂತಲಿಂಗಣ್ಣ ಕಾಲೋನಿ ಪಾರ್ಕ್‌ನಲ್ಲಿ ಹಾಗೂ ವಿವಿಧ ಹಾಸ್ಟೆಲ್, ಹಳ್ಳಿಗಳಲ್ಲಿ ಆಚರಿಸಲಾಯಿತು. ಎಐಡಿಎಸ್‌ಓ ರಾಜ್ಯ ಖಜಾಂಚಿ ಸುಭಾಷ್ ಅವರು ಮಾತನಾಡಿ ಭಗತ್ ಸಿಂಗ್, ಕ್ರಾಂತಿ ಮತ್ತು ಸ್ವಾತಂತ್ರ್ಯದ ಬಗೆಗಿನ ತಮ್ಮ ವಿಚಾರವನ್ನು ಎಷ್ಟು ಪ್ರಖರವಾಗಿ ಹರಡಿದ್ದರೆಂದರೆ ಸಾವಿರಾರು ಜನ ಭಗತ್ ಸಿಂಗ್ ಅವರ ವಿಚಾರಗಳನ್ನು ಈಡೇರಿಸಲು ಪ್ರಾಣತ್ಯಾಗಕ್ಕೆ ಸಿದ್ಧರಾಗಿ ಬೀದಿಗಿಳಿದರು. ಭಗತ್ ಸಿಂಗ್ ಅವರ ಪ್ರಕಾರ ಸ್ವಾತಂತ್ರ್ಯದ ಪರಿಕಲ್ಪನೆ ಹೀಗಿತ್ತು ಸ್ವಾತಂತ್ರ್ಯ ಪಡೆಯುವುದು ಮಾತ್ರವೇ ನಮ್ಮ ಉದ್ದೇಶವಲ್ಲ, ಅದು ಮೊದಲ ಹೆಜ್ಜೆ ಮಾತ್ರ! ನಮ್ಮಗುರಿಯಿರುವುದು ಒಂದು ಉನ್ನತವಾದ ರಾಷ್ಟ್ರವನ್ನು ನಿರ್ಮಾಣ ಮಾಡುವುದು. ಯಾವ ರಾಷ್ಟ್ರತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತದೆಯೋ, ಯಾವ ರಾಷ್ಟ್ರಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದಿಲ್ಲವೋ, ಯಾವ ರಾಷ್ಟ್ರ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೋ ಅಂತಹ ರಾಷ್ಟ್ರ". ಶಿಕ್ಷಣದ ವ್ಯಾಪಾರಿಕರಣ, ನಿರುದ್ಯೋಗ, ಹಸಿವು ಬಡತನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಮಸ್ಯೆಗಳನ್ನು ತಡೆಯಲು ಹಾಗೂ ಶಿಕ್ಷಣ-ಮಾನವತೆ-ಸಂಸ್ಕೃತಿ ಉಳಿಸಲು, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಗತ್ ಸಿಂಗ್ ಅವರ ವಿಚಾರಗಳಿಂದ ಸ್ಫೂರ್ತಿಪಡೆದು ಮುಂಬನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಲಾಯಿತು. ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಕೆ.ಈರಣ್ಣ, ಅವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರವು 6ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ವಿರೋಧಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು 50ಲಕ್ಷ ಸಹಿ ಸಂಗ್ರಹ ಆಂದೋಲನವನ್ನು ಭಗತ್ ಸಿಂಗ್ ಅವರ ಹುತಾತ್ಮ ದಿನವನ್ನು ಸಂಕಲ್ಪದೊಂದಿಗೆ ಆಚರಿಸಲಾಯಿತು ಎಂದರು. ಜಿಲ್ಲಾ ಉಪಾಧ್ಯಕ್ಷೆ ಎಂ.ಶಾಂತಿ, ಉಮಾ ಮತ್ತು ಕಛೇರಿ ಕಾರ್ಯದರ್ಶಿ ನಿಹಾರಿಕ ಪದಾಧಿಕಾರಿಗಳಾದ ಆಯಿಷಾ, ಶಿವು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.