ಮತದಾರರ ಗುರುತಿನ ಚೀಟಿ ಮಾದರಿಯಲ್ಲಿ ಮದುವೆ ಆಮಂತ್ರಣ

ಧಾರವಾಡ 16: ಭಾರತ ಚುನವಣಾ ಆಯೋಗದಿಂದ ನೀಡುವ ಮತದಾರರ ಗುರುತಿನ ಚೀಟಿಯನ್ನು ಹೋಲುವಂತೆ ರಚಿಸಿರುವ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ.  

     ಬೆಸ್ಕಾಂ ನೌಕರರಾಗಿರುವ ಮಂಜುನಾಥ ಈರಪ್ಪ ಹೂಗಾರ ಹಾಗೂ ಹೆಸ್ಕಾಂನ ಇಂಜಿನೀಯರ್ ಆಗಿರುವ ಮಹೇಶ್ ಹೂಗಾರ ಅವರು ತಮ್ಮ ಸಹೋದರಿ ಅನ್ನಪೂರ್ಣಳ ಮದುವೆಯನ್ನು ಇದೇ ಎ.26 ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದಾರೆ.              ಮದುವೆ ಸಂದರ್ಭದಲ್ಲಿಯೇ ಚುನಾವಣೆಯು ನಡೆಯುತ್ತಿರುವುದರಿಂದ ಅಮಂತ್ರಣ ಪತ್ರಿಕೆಯು ಮತದಾರರಲ್ಲಿ ಜಾಗೃತಿಯನ್ನೂ ಮೂಡಿಸುವಂತಿರಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ವಿಭಿನ್ನವಾಗಿ ಮುದ್ರಿಸಿ ವಿತರಿಸುತ್ತಿದ್ದಾರೆ. 

     ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ  ಬಹುತೇಕ ಜನರು ತಮ್ಮ ಹಕ್ಕು ಚಲಾಯಿಸದೇ ಮತದಾನವನ್ನು ತಪ್ಪಿಸಿ ರಜೆ ಕಳೆಯಲು ಪ್ರವಾಸಕ್ಕೆ ತೆರಳುವುದನ್ನು ಹಿಂದಿನ ಚುನಾವಣೆಗಳಲ್ಲಿ ಗಮನಿಸಿ, ತಮ್ಮಿಂದ ಸಾಧ್ಯವಾದಷ್ಟು ಜನರಿಗೆ ತಿಳುವಳಿಕೆ ಮೂಡಿಸುವ ಪ್ರಯತ್ನವಾಗಿ ಈ ಕಾರ್ಯ ಮಾಡಿದ್ದೇವೆ ಎಂದು ನರಗುಂದದ ಹೂಗಾರ ಕುಟುಂಬದ ಸದಸ್ಯರು ಹೆಮ್ಮೆಯಿಂದ ಹೇಳುತ್ತಾರೆ. ಆಮಂತ್ರಣ ಪತ್ರಿಕೆಯಲ್ಲಿ ರಕ್ತದಾನ ಮತ್ತು ಮತದಾನದ ಮಹತ್ವ ಸಾರುವ ಸಂದೇಶಗಳನ್ನು ಮುದ್ರಿಸಲಾಗಿದೆ