ಬೆಂಗಳೂರು, ಏ.3, ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಬೆಳ್ಳಂಬೆಳಿಗ್ಗೆ ತೋಟಗಾರಿಕಾ ಸಚಿವ ನಾರಾಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲದೇ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಸಾಮಾಜಿಕ ಅಂತರ ಎನ್ನುವುದು ಸ್ವಯಂ ಪ್ರೇರಣೆಯಾಗಬೇಕು. ಸಾಮಾಜಿಕ ತುರ್ತು ಪರಿಸ್ಥಿತಿ ಇದಾಗಿರುವುದರಿಂದ ನಮ್ಮಷ್ಟಕ್ಕೆ ನಾವು ನಿಬಂಧನೆ ಹಾಕಿಕೊಳ್ಳಬೇಕು. ಪೊಲೀಸರಿಂದಾಗಲೀ ಅಥವಾ ಸರ್ಕಾರದ ಒತ್ತಾಯವಾಗಿ ಆಗಲೀ ಆಗಬಾರದು. ಸಾಮಾಜಿಕ ಅಂತರ ಎನ್ನುವುದು ಕೊರೊನಾ ಮಹಾಮಾರಿಯ ವಿರುದ್ಧ ಸಮರ ಸಾರಲು ಇರುವ ಏಕೈಕ ಪರಿಹಾರ. ಜನರ ಹಾಗೂ ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೇ ಸಾಮಾಜಿಕ ಅಂತರ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ತರಕಾರಿ ಬೆಳೆದ ರೈತರಿಗಾಗಲೀ ಗ್ರಾಹಕರಿಗಾಗಲೀ ಲಾಕ್‌ಡೌನ್ ನಿಂದ ಯಾವುದೇ ತೊಂದರೆಯಾಗಬಾರದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಟ್ಟ ಕ್ರಮಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೃಷಿಕರು ತಮ್ಮ ಕೃಷಿ ಚಟುವಟಿಕೆ ಪರಿಕರ ಮಾರಾಟ ನಡೆಸಲು ಯಾವುದೇ ತೊಂದರೆಯಾಗದು.
ಇದನ್ನು ಪರಿಶೀಲನೆ ಮಾಡಲೆಂದು ತಾವು ಹಾಗೂ ಇತರೆ ಸಚಿವರು ಭೇಟಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.ತೋಟಗಾರಿಕಾ ಸಚಿವ ನಾರಾಯಣಗೌಡ ಮಾತನಾಡಿ, ಕಳೆದೆರಡು ದಿನಗಳ ಹಿಂದೆ ರೈತರಿಗೆ ಇದ್ದಂತಹ ತೊಂದರೆ ಈಗಿಲ್ಲ. ರೈತರ ಪರಿಕರ ಫಸಲುಗಳನ್ನು ಮಾರಾಟ ಮಾಡಲು ಸರ್ಕಾರ ಸುಲಲಿತ ಮಾಡಿಕೊಟ್ಟಿರುವುದರಿಂದ ಈಗ ತೊಂದರೆಯಿಲ್ಲ ಎಂದರು.ಕಳೆದೆರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ಎಲ್ಲಾ ಸಚಿವರೊಂದಿಗೆ ಸಭೆ ನಡೆಸಿ ರೈತರ ಫಸಲು ಬೆಳೆ ತರಕಾರಿಗಳ ಮಾರಾಟಕ್ಕೆ ಹಾದಿ ಸುಗಮಗೊಳಿಸಿದ್ದಾರೆ. ಸಂಬಂಧಿಸಿದ ಎಲ್ಲಾ ಸಚಿವರುನಿನ್ನೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆವು.ಈ ದಿನ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಮಾರಾಟ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದ್ದೇವೆ ಎಂದರು.