ಹಿರಿಯ-ಕಿರಿಯರ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದ ಮನು ಭಾಕರ್

ತಿರುವನಂತಪುರಂ, ಫೆ 5 ,ಯುವ ಪ್ರತಿಭೆ ಮನು ಭಾಕರ್ ಅವರು ಇಲ್ಲಿ ನಡೆಯುತ್ತಿರುವ ನ್ಯಾಷನಲ್ ಶೂಟಿಂಗ್ ಟ್ರಯಲ್ಸ್‌ನ ಮಹಿಳೆಯರ 25 ಮೀ ಪಿಸ್ತೂಲ್ ಹಾಗೂ ಕಿರಿಯರ 25 ಮೀ. ಪಿಸ್ತೂಲ್ ಟಿ-2 ವಿಭಾಗಗಳಲ್ಲಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಮನು ಭಾಕರ್, ಎರಡೂ ವಿಭಾಗಗಳಲ್ಲಿ 584 ಅಂಕಗಳನ್ನು ಕಲೆ ಹಾಕಿದ್ದಾರೆ. ಮಹಿಳೆಯರ ವಿಭಾಗದ ಅಂತಿಮ ಸುತ್ತಿನಲ್ಲಿ 32 ಅಂಕ ಪಡೆದು ಮೊದಲ ಸ್ಥಾನ ಪಡೆದರು. ಮಹಾರಾಷ್ಟ್ರದ ಅಭಿದ್ನ್ಯಾ ಅಶೋಕ್ ಪಾಟೀಲ್ 28 ಶಾಟ್‌ಗಳ ಮೂಲಕ ಎರಡನೇ ಸ್ಥಾನ ಪಡೆದರು. ರಾಜ್ಯದ ಸಹ ಶೂಟಿಂಗ್ ಪಟು ಗೌರಿ ಶೆರನ್ 24 ಶಾಟ್ ಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕಿರಿಯರ ಅಂತಿಮ ಸುತ್ತಿನಲ್ಲಿ ಮನು ಭಾಕರ್ 30 ಅಂಕ ಕಲೆ ಹಾಕಿ ಚಿನ್ನಕ್ಕೆ ಮುತ್ತಿಟ್ಟರು. ರಿಥಮ್ ಸಂಗ್ವನ್ 27 ಶಾಟ್ ಗಳೊಂದಿಗೆ ಬೆಳ್ಳಿ ಪದಕ ಪಡೆದರು. ವಿಭೂತಿ ಭಾಟಿಯಾ 25ರೊಂದಿಗೆ ಕಂಚಿನ ಪದಕಕ್ಕೆ ಸಮಾಧಾನಗೊಂಡರು.