ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಅಭಿಜಿತ್ ಬ್ಯಾನರ್ಜಿಗೆ ಮನಮೋಹನ್ ಸಿಂಗ್ ಅಭಿನಂದನೆ

ನವದೆಹಲಿ ಅ, 16:    ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರನ್ನು ಮಾಜಿ ಪ್ರಧಾನಿ ಮನಮೋಹನ್  ಸಿಂಗ್ ಅಭಿನಂದಿಸಿದ್ದಾರೆ. 

ಬಡತನ ನಿರ್ಮೂಲನೆ ಮತ್ತು ಹೊಸ ಆಯಾಮದ   ಅಭಿವೃದ್ಧಿ ಕುರಿತ ಅವರ ಕೃತಿಗಳು ನಿಜಕ್ಕೂ ಮಾರ್ಗದರ್ಶಿ ಎಂದು ಬಣ್ಣಿಸಿದ್ದಾರೆ. 

ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಬ್ಯಾನರ್ಜಿಯವರ ಅನುಶೋಧನೆಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳ ನೀತಿ ರೂಪಿಸಲು ಬಹಳ ಉಪಯುಕ್ತ ಮತ್ತು ಪ್ರಯೋಜನಕಾರಿ ಎಂದುಅವರು ಅಭಿಪ್ರಾಯಪಟ್ಟಿದ್ದಾರೆ. 

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದ  ಭಾರತೀಯ ಮೂಲದ ಎರಡನೇ ವ್ಯಕ್ತಿ ಎನ್ನುವುದು ಹೆಮ್ಮೆಯ ವಿಷಯ ಎಂದು ಬ್ಯಾನರ್ಜಿಯವರಿಗೆ ಬರೆದ ಪತ್ರದಲ್ಲಿ ಮನಮೋಹನ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಭಾರತದಂಥ ಅಭಿವೃದ್ಧಿಶೀಲ ದೇಶಗಳ ನೀತಿ ರೂಪಿಸಲು ಅನ್ವಯಿಸಬಹುದಾದ ಮತ್ತು ಉಪಯುಕ್ತ ಅಭಿವೃದ್ಧಿ ಅರ್ಥಶಾಸ್ತ್ರದ ಅನುಶೋಧನೆಯನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ತಮಗೆ  ಸಂತಸ ತಂದಿದೆ  ಎಂದು ಸಂದೇಶದಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಅಮತ್ರ್ಯಸೇನ್ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದರು.