ಸಕ್ರಿಯ ಕೊರೋನಾ ಪ್ರಕರಣಗಳಲ್ಲಿ ಬೆಂಗಳೂರು ನಗರವನ್ನೂ ಮೀರಿಸಿದ ಮಂಡ್ಯ

ಬೆಂಗಳೂರು, ಮೇ 20,ಸಕ್ಕರೆ ನಾಡು ಮಂಡ್ಯ ಜಿಲ್ಲೆ ಈಗ ಕೊರೋನಾ ವೈರಸ್ ಸೋಂಕಿತರಿಂದ ತತ್ತರಿಸಿದ್ದು, ಬೆಂಗಳೂರು ನಗರವನ್ನೂ ಮೀರಿಸಿ ಮೊದಲ ಸ್ಥಾನಕ್ಕೇರಿಕೆಯಾಗಿದೆ.ಹೊರರಾಜ್ಯಗಳ ಕಾರ್ಮಿಕರನ್ನು ಮರಳಿ ಕರೆತರಲು ಸರ್ಕಾರ ಅನುಮತಿ ಕಲ್ಪಿಸಿದ ನಂತರ ಮಂಡ್ಯಕ್ಕೆ ಹಲವು ಮಂದಿ ಮುಂಬೈನಿಂದ ಆಗಮಿಸಿದ್ದು, ಅವರಲ್ಲಿ ಅನೇಕರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 147ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 117 ಇದೆ. ಮಂಗಳವಾರ ಒಂದೇ ದಿನ ಮಂಡ್ಯಕ್ಕೆ ಮುಂಬೈನಿಂದ ಆಗಮಿಸಿದ 71 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಬುಧವಾರ ಇಲ್ಲಿಯವರೆಗೆ 8 ಜನರಲ್ಲಿ ಸೋಂಕು ವರದಿಯಾಗಿದೆ.
ಬೆಂಗಳೂರು ನಗರದಲ್ಲಿ ಒಟ್ಟು 8 ಸಾವು ಸೇರಿ 250 ಸೋಂಕಿತರಿದ್ದಾರೆ. ಈ ಪೈಕಿ 124 ಮಂದಿ ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮಂಡ್ಯ 168 ಒಟ್ಟು ಸೋಂಕಿತರನ್ನು ಹೊಂದಿದ್ದು, 21 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿ ಕಳೆದೊಂದು ವಾರದಿಂದ ಸೋಂಕು ಹೆಚ್ಚಳವಾಗಿರುವುದರಿಂದ ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಬರಗಿ 134 ಸೋಂಕಿತರಿಂದ ಮೂರನೇ ಸ್ಥಾನದಲ್ಲಿದೆ. ಬೆಳಗಾವಿ 116, ದಾವಣಗೆರೆ 112 ಸ್ಥಾನಗಳಿಂದ ತಲಾ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.