ಪೊಲೀಸರಿಗೆ ಹಲ್ಲೆ ನಡೆಸಿದ ಆರೋಪಿ ಕಾಲಿಗೆ ಗುಂಡೇಟು

ಬೆಂಗಳೂರು, ಮಾ.26, ದೇಶಾದ್ಯಂತ ಲಾಕ್‌ಡೌನ್‌ ಸಂದರ್ಭದಲ್ಲಿ ಬುಧವಾರ ಪೊಲೀಸ್ ಪೇದೆಗೆ ಹಲ್ಲೆ ನಡೆಸಿ ಪೊಲೀಸ್  ವಶದಲ್ಲಿರುವ ಆರೋಪಿ ತಾಜುದ್ದೀನ್ ಎಂಬಾತನ ಕಾಲಿಗೆ ಪೊಲೀಸರು ಗುರುವಾರ ಬೆಳಗ್ಗೆ   ಗುಂಡು ಹೊಡೆದಿದ್ದಾರೆ.ಪೊಲೀಸರ ಗುಂಡೇಟು ತಗುಲಿ ಎಡಗಾಲಿಗೆ  ಗಾಯಗೊಂಡಿರುವ ಭೂಪಸಂದ್ರದ ತಾಜುದ್ದೀನ್(25) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದು ದುಷ್ಕರ್ಮಿಯು ತಪ್ಪಿಸಿಕೊಳ್ಳಲು ಕಲ್ಲಿನಿಂದ ನಡೆಸಿದ ಹಲ್ಲೆಯಿಂದ  ಗಾಯಗೊಂಡಿರುವ  ಸಬ್‌ಇನ್ಸ್‌ಪೆಕ್ಟರ್ ರೂಪಾ ಹಾಗೂ ಮುಖ್ಯಪೇದೆ ಮಂಜಣ್ಣ  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ತಾಜುದ್ದೀನ್ ಜೊತೆಯಲ್ಲಿದ್ದ 9 ಮಂದಿಯನ್ನು ಬಂಧಿಸಲಾಗಿದೆ.  ಸಂಜಯನಗರದ  ಭೂಪಸಂದ್ರದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಲಾಕ್‌ಡೌನ್ ಉಲ್ಲಂಘಿಸಿ ಮನೆಯಿಂದ  ಹೊರಬರುತ್ತಿದ್ದವರನ್ನು ಪ್ರಶ್ನಿಸಿಸುತ್ತಿದ್ದಾಗ ತಾಜುದ್ದೀನ್  ಸೇರಿ 10 ಮಂದಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಆರೋಪಿ ತಾಜುದ್ದೀನ್ ಸೇರಿ 10 ಮಂದಿ  ಸಂಜಯನಗರದಲ್ಲಿ ಬುಧವಾರ ಗಸ್ತು ತಿರುಗುತ್ತಿದ್ದಾಗ ಇಬ್ಬರು ಪೊಲೀಸ್ ಪೇದೆಗಳ ಹಲ್ಲೆ  ಮಾಡಿದ್ದು ಕೂಡಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು  ಬಂಧಿಸಿದ್ದರು.
 ಸ್ಥಳ ಮಹಜರು ಮಾಡಲು ಇಂದು ಬೆಳಿಗ್ಗೆ 6.30ರ ವೇಳೆ  ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋದಾಗ ಮತ್ತೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರೂಪಾ  ಹಾಗೂ ಮುಖ್ಯಪೇದೆ ಮಂಜಣ್ಣ ಅವರ ಮೇಲೆ ಕಲ್ಲು ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಈ  ವೇಳೆ ಶರಣಾಗುವಂತೆ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಅವರು ಗಾಳಿಯಲ್ಲಿ ಒಂದು  ಸುತ್ತು ಗುಂಡು ಹಾರಿಸಿ ಮನವಿ ಮಾಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಗುಂಡು  ಹಾರಿಸಿದ್ದು ಅದು ಆತನ ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಬ್ಯಾಪಿಸ್ಟ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್‌ಐ ರೂಪಾ ಹಾಗೂ ಮಂಜಣ್ಣ ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.