ಕೋಲ್ಕತಾ, ಜ 12: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಾಲ್ಗೊಂಡಿದ್ದ ಕೋಲ್ಕತಾ ಪೋರ್ಟ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರುಹಾಜರಾಗಿದ್ದರು. ಪ್ರಧಾನಿ ಮೋದಿ ಅವರೊಂದಿಗೆ, ಮಮತಾ ಬ್ಯಾನರ್ಜಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಪ್ರಚಾರ ನಡೆಯಿತಾದರೂ, ಕೊನೆಗೆ ಮಮತಾ ಬ್ಯಾನರ್ಜಿ ಕಾರ್ಯಕ್ರಮದಿಂದ ದೂರವೇ ಉಳಿದರು. ರಾಜ್ಯಪಾಲ ಜಗದೀಪ್ ಧಂಕರ್ ಮಾತ್ರ ಮೋದಿಯವರ ಜತೆ ವೇದಿಕೆ ಹಂಚಿಕೊಂಡರು.
ಎರಡು ದಿನಗಳ ಕೊಲ್ಕತ್ತಾ ಭೇಟಿಯ ಭಾಗವಾಗಿ ಭಾನುವಾರ ಬೆಳಿಗ್ಗೆ ಬೇಲೂರು ಮಠದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿಂದ ನೇರವಾಗಿ ನೇತಾಜಿ ಸ್ಟೇಡಿಯಂನಲ್ಲಿ ನಡೆದ ಕೊಲ್ಕಾತ್ತಾ ಪೋರ್ಟ್ ಟ್ರಸ್ಟ್ 150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು.
ಶನಿವಾರ ಕೋಲ್ಕತ್ತಾಗೆ ಆಗಮಿಸಿದ ಮೋದಿ ಅವರನ್ನು ಗೌರವ ಪೂರ್ವಕವಾಗಿ ಮಮತಾ ಬ್ಯಾನರ್ಜಿ ಭೇಟಿಯಾದರು. ಸಿಎಎ ಹಿಂತೆಗೆದುಕೊಳ್ಳಬೇಕು,ಎನ್ಪಿಆರ್ ಮತ್ತು ಎನ್ಆರ್ಸಿ ಕೈಗೆತ್ತಿಕೊಳ್ಳಬಾರದು. ಬಂಗಾಳದ ಜನರು ಇವುಗಳನ್ನು ವಿರೋಧಿಸುತ್ತಿದ್ದಾರೆ ಎಂದು ಮೋದಿ ಗಮನಕ್ಕೆ ತಂದರು. ಆದರೆ ಪ್ರದಾನಿ ಈ ವಿಷಯಗಳಿಗೆ ನೇರ ಉತ್ತರವನ್ನು ನೀಡದೆ ಸಮಯ ಬಂದಾಗ ಮಾತನಾಡುವುದಾಗಿ ಉತ್ತರಿಸಿದರು. ಮೋದಿಯನ್ನು ಭೇಟಿಯಾದ ನಂತರವೇ ಮಮತಾ ಬ್ಯಾನರ್ಜಿ ಕೂಡಲೇ ಸಿಎಎ ವಿರೋಧಿ ಧರಣಿಯಲ್ಲಿ ಭಾಗವಹಿಸಿದರು. ಏತನ್ಮಧ್ಯೆ, ಶನಿವಾರದಂತೆಯೇ ಭಾನುವಾರ ಕೋಲ್ಕತ್ತಾದಲ್ಲಿ ಸಿಎಎ ವಿರೋಧಿ "ಮೋದಿ ಗೋ ಬ್ಯಾಕ್" ಪ್ರತಿಭಟನೆಗಳು ಮುಂದುವರೆದಿದ್ದವು.