ನವದೆಹಲಿ, ಮೇ 19, ದೆಹಲಿಯಲ್ಲಿ ಲಾಕ್ ಡೌನ್ 4.0 ನಲ್ಲಿ ಕೆಲ ವಿನಾಯ್ತಿಗಳನ್ನು ನೀಡಿದೆಯಾದರೂ, ಜನರು ಶಿಸ್ತು ಕಾಪಾಡಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ದೆಹಲಿಯ ಜನತೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೆಲ ಆರ್ಥಿಕ ಚಟುವಟಿಕೆಗಳು ಇಂದಿನಿಂದ ಆರಂಭಗೊಳ್ಳಲಿವೆ. ಶಿಸ್ತನ್ನು ಪಾಲಿಸುವುದು ಮತ್ತು ಕೊರೋನಾ ವೈರಸ್ ಸೋಂಕು ತಡೆಯುವುದು ನಮ್ಮ ಜವಾಬ್ದಾರಿ. ಮಾಸ್ಕ್, ಹ್ಯಾಡ್ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯ. ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಾವು ಶಿಸ್ತಿನಿಂದ ಇದ್ದರೆ, ದೇವರು ನಮಗೆ ಸಹಾಯ ಮಾಡುತ್ತಾನೆ" ಎಂದಿದ್ದಾರೆ.ದೆಹಲಿ ಸರ್ಕಾರ ಮೇ 18ರಿಂದ ಲಾಕ್ ಡೌನ್ ಘೋಷಣೆ ಮಾಡಿತ್ತು. ಈಗ ಅದನ್ನು ಕೊಂಚ ಸಡಿಲಗೊಳಿಸಿ ಮಾರ್ಗಸೂಚಿ ಹೊರಡಿಸಲಾಗಿದೆ. ದೆಹಲಿಯಲ್ಲಿ ರಾತ್ರಿ ಏಳರಿಂದ ಬೆಳಗ್ಗೆ ಏಳರವರೆಗೆ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಟ್ಯಾಕ್ಸಿ, ಕ್ಯಾಬ್ ಗಳಲ್ಲಿ ಕೇವಲ ಇಬ್ಬರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಟೋ ರಿಕ್ಷಾಗಳಲ್ಲಿ ಕೇವಲ ಓರ್ವ ಪ್ರಯಾಣಿಕರು ಪ್ರಯಾಣಿಸಬಹುದು. ಬಸ್ ಗಳಿಗೆ 20 ಜನರನ್ನು ಸಾಗಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.