ಮಳೆ ಅಂದ ಬೆಳೆ ಚಂದಲೇ ಪರಾಕ್‌: ಕಾರಣಕ ಭವಿಷ್ಯ

ಕಂಪ್ಲಿ 15: ಸಮೀಪದ ಯರ‌್ರಂಗಳಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ದಸರಾ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ದಸರ ಮಹೋತ್ಸವದಲ್ಲಿ ಮಲ್ಲಯ್ಯತಾತನವರ ಮಗ ನವೀನ್ ತಾತ ಸರಪಳಿಯನ್ನು ತುಂಡರಿಸಿ ಸರಪಳಿ ಪವಾಡ ಮಾಡಿ ಭವಿಷ್ಯ ನುಡಿದರು. 

 ಪ್ರಾರಂಭದಲ್ಲಿ ಗ್ರಾಮದ ಭಕ್ತರು ದೇವಸ್ಥಾನದ ಮೈಲಾರಿಲಿಂಗೇಶ್ವರ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಡೊಳ್ಳು, ತಾಳ ಮೇಳದೊಂದಿಗೆ ಚಾಂಗ್ ಮಲೈ, ಮೈಲಾರಿಲಿಂಗೇಶ್ವರ ಸ್ವಾಮಿಗೆ ಜಯವಾಗಲಿ ಎಂದು ಜಯ ಘೋಷಣೆಗಳನ್ನು ಕೂಗುತ್ತಾ ಗಂಗೆ ಪೂಜೆಗೆ ತೆರಳಿ ಪೂಜೆ ಸಲ್ಲಿಸಿ ಪುನಃ ಯಥಾ ಸ್ಥಿತಿಯಲ್ಲಿ ದೇವಸ್ಥಾನಕ್ಕೆ ಬಂದರು. 

 ಧಾರ್ಮಿಕ ವಿಧಿ-ವಿಧಾನಗಳಿಂದ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಗೊರವರ ವೇಷ ದರಿಸುವುದರ ಮೂಲಕ ಭಂಡಾರವನ್ನು ಹಚ್ಚಿಕೊಂಡು ಡಮರುಗಳನ್ನು ಹಿಡಿದು ಏಳುಕೋಟಿ, ಏಳುಕೋಟಿ ಚಾಂಗುಲೆ ಎನ್ನುವ ದೇವರ ನಾಮ ಸ್ಮರಣೆಯನ್ನು ಸ್ಮರಿಸುತ್ತಾ ಕಂಭಕ್ಕೆ ಕಟ್ಟಿದ್ದ ಬೃಹದಾಕಾರದ ಸರಪಳಿಯನ್ನು ಹಿಡಿದು ಒಂದೆ ಏಟಿಗೆ ಸರಪಳಿಯನ್ನು ಹರಿದು ನೆರೆದಿದ್ದ ಸಾವಿರಾರು ಮಂದಿ ಭಕ್ತ ಸಮೂಹ ಅಚ್ಚರಿಗೊಂಡಿತು. 

 ನಂತರ ಜರುಗಿದ ಕಾರಣಕೋತ್ಸವದಲ್ಲಿ “ಮಳೆ ಅಂದ ಬೆಳೆ ಚಂದಲೇ ಪರಾಕ್‌” ಎಂದು ಕಾರಣಕ ಭವಿಷ್ಯ ನುಡಿದರು. ಇದಕ್ಕೆ ನೆರೆದ ನೂರಾರು ಜನ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಕುರುಗೋಡು, ಬಾದನಹಟ್ಟಿ, ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ಸೋಮಸಮುದ್ರ, ಸೇರಿದಂತೆ ಇತರೆ ಸುತ್ತ-ಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಮೈಲಾರಿಲಿಂಗೇಶ್ವರ ಸ್ವಾಮಿಯ ಪ್ರಸಾದ ಸ್ವೀಕರಿಸಿದರು.