ಮುಂಬೈ, ನ.27 -ಮಹಾರಾಷ್ಟ್ರ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ 288 ಸದಸ್ಯರ ಪೈಕಿ 283 ಸದಸ್ಯರು ಬುಧವಾರ ವಿಧಾನಸಭೆಯ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಹಂಗಾಮಿ ಸ್ಪೀಕರ್ ಕಾಳಿದಾಸ್ ಎನ್.ಕೊಲಂಬ್ಕರ್ ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೂ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಐವರು ಶಾಸಕರು ಸದನಕ್ಕೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನ ಭವನ ಪ್ರವೇಶದ್ವಾರದಲ್ಲಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು, ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಮತ್ತು ಹಲವು ಕಾಂಗ್ರೆಸ್ ನಾಯಕರು ಹಾಗೂ ನೂತನ ಶಾಸಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ ದೃಶ್ಯ ಕಂಡುಬಂತು.
ಅವರು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರನ್ನು ಸಮಾನ ರೀತಿಯಲ್ಲಿ ಸ್ವಾಗತಿಸಿ ಎಲ್ಲರಿಗೂ ಕೈ ಮುಗಿದು ‘ನಮಸ್ತೆ’ ಎಂದು ಶುಭ ಹಾರೈಸಿದರು.
ಸೋದರಸಂಬಂಧಿ ಮತ್ತು ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಂದಾಗ, ಸುಪ್ರಿಯಾಳನ್ನು ನೋಡಿ ಮುಗುಳ್ನಕ್ಕು, ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಕೈಕುಲುಕಿ, ತಬ್ಬಿಕೊಂಡರು, ಈ ವೇಳೆ ಸುಪ್ರಿಯಾ ಅವರು ಅಜಿತ್ ಅವರ ಪಾದ ಮುಟ್ಟಿ ನಮಸ್ಕರಿಸಿದರು.
ಸ್ವಲ್ಪ ಸಮಯದ ನಂತರ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಂದಾಗಲೂ ಸುಪ್ರಿಯಾ ಆತ್ಮೀಯ ಸ್ವಾಗತ ಕೋರಿ ಕೈಕುಲುಕಿದರು. ತಮ್ಮ ಸಂಬಂಧಿ ರೋಹಿತ್ ಪವಾರ್, ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ, ಅನಿಲ್ ದೇಶ್‌ಮುಖ್ ಮತ್ತು ಇತರ ಕೆಲವರಿಗೆ ವಿಶೇಷ ಸ್ವಾಗತ ಕೋರಿದರು.
ಬಿಜೆಪಿಯ ಮಾಜಿ ಸ್ಪೀಕರ್ ಹರಿಭೌ ಬಾಗಡೆ, ಮಾಜಿ ಸಚಿವ ಆಶಿಶ್ ಶೆಲಾರ್, ಎನ್‌ಸಿಪಿ ರಾಜ್ಯ ಮುಖ್ಯಸ್ಥ ಜಯಂತ್ ಪಾಟೀಲ್, ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಬಾಳಾ ಸಾಹೇಬ್ ಥೋರಟ್, ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಏಕನಾಥ ಶಿಂಧೆ ಮತ್ತು ಇತರ ಹಿರಿಯ ನಾಯಕರಿಗೆ ವಿಶೇಷ ಗೌರವದೊಂದಿಗೆ ಸುಪ್ರಿಯಾ ಸ್ವಾಗತ ಕೋರಿದರು.
ರಾಜ್ಯದಲ್ಲಿ ತಲೆದೋರಿದ್ದ ಒಂದು ತಿಂಗಳ ರಾಜಕೀಯ ಬಿಕ್ಕಟ್ಟು, ಶಿವಸೇನೆ -ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಉದ್ಧವ್ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ ನಂತರ ಸಂಪೂರ್ಣ ಶಮನಗೊಂಡಿದ್ದು, ಎಲ್ಲರೂ ನಿರಾಳಭಾವದಲ್ಲಿ ಇದ್ದಂತೆ ಕಂಡುಬಂದರು.
ಗುರುವಾರ ಸಂಜೆ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಠಾಕ್ರೆ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಮತ್ತು ಗೌಪ್ಯತೆಯನ್ನು ಬೋಧಿಸಲಿದ್ದಾರೆ.
ಈ ಮಧ್ಯೆ, ಪಾಲ್ಘಾರ್ ಮೂಲದ ಪಕ್ಷವಾದ ಬಹುಜನ ವಿಕಾಸ್ ಅಘಾಡಿ (ಬಿವಿಎ)ಯು ಮಹಾ ವಿಕಾಸ್ ಅಘಾಡಿ (ಎಂವಿಎ) ಗೆ ಸೇರ್ಪಡೆಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ತಮ್ಮ ಮೂರು ಶಾಸಕರೊಂದಿಗೆ ಬಿವಿಎ ಜೊತೆ ಸೇರಲು ನಿರ್ಧರಿಸಿದ್ದೇವೆ ಎಂದು ಪ್ರಕಟಿಸಿದರು.
ಹಿತೇಂದ್ರ ಠಾಕೂರ್, ಅವರ ಪುತ್ರ ಕ್ಷಿತಿಜ್ ಠಾಕೂರ್ ಮತ್ತು ರಾಜೇಶ್ ಪಾಟೀಲ್ ಮತ್ತು ಅವರ ಬೆಂಬಲ ಸಿಕ್ಕಿರುವುದರಿಂದ 288 ಸದಸ್ಯರ ವಿಧಾನಸಭೆಯಲ್ಲಿ ಎಂವಿಎ ಬಲವು 169 ಕ್ಕೆ ಏರಿದೆ ಎಂದು ಚವಾಣ್ ಹೇಳಿದರು.
ಈ ಮಧ್ಯೆ, ಉದ್ಧವ್ ಠಾಕ್ರೆ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರ ರಾಜ್ಯಪಾಲ ಕೋಶಿಯಾರಿ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.
ಈ ವೇಲೆ ಅವರು ಸಾಂಪ್ರದಾಯಿಕ ಕುರ್ತಾ-ಪೈಜಾಮ ಧರಿಸಿದ್ದರು. ಠಾಕ್ರೆ ಅವರ ಪತ್ನಿ ರಶ್ಮಿ ಕೂಡ ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್‌ಸಿಪಿ ಉನ್ನತ ನಾಯಕರ ಸಭೆ ನಡೆಯುತ್ತಿದ್ದು, ಇದರಲ್ಲಿ ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಪ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ, ಅಹಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಉನ್ನತ ನಾಯಕರು ಈ ವಿಷಯದ ಬಗ್ಗೆ ಸಭೆ ನಡೆಸುತ್ತಿದ್ದಾರೆ.