ಮುಂಬೈ, ನ 7: ಯಾವುದೇ ಕಾರಣಕ್ಕೂ ಶಿವಸೇನೆಗೆ ಬೆಂಬಲ ನೀಡುವುದಿಲ್ಲ ಎಂದು ಎನ್ ಸಿ ಪಿ ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಗುರುವಾರ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ವಿಧಿಬದ್ಧವಾಗಿ ಹಕ್ಕು ಮಂಡಿಸುವುದರೊಂದಿಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರೋಚಕ ಮತ್ತು ನಾಟಕೀಯ ವಿದ್ಯಮಾನಗಳು ಕೊನೆಗೊಳ್ಳುವ ಹಂತಕ್ಕೆ ಬಂದಿವೆ. ಈಗ ಬಿಜೆಪಿಗೆ ಶಿವಸೇನೆ ಅನಿವಾರ್ಯವಾಗಿದ್ದು, ಅದೇ ರೀತಿ ಶಿವಸೇನೆಗೂ ಬಿಜೆಪಿ ಅಗತ್ಯವಿದೆ. ಬೇರೆ ಅವಕಾಶಗಳು ಇಲ್ಲದೇ ಇರುವ ರಾಜಕೀಯ ಸ್ಥಿತಿ ಎದುರಾಗಿದೆ. ಹೀಗಾಗಿ ಇನ್ನು ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ಭಾ ಜ ಪ ನೇತೃತ್ವದ ಸರ್ಕಾರ ರಚನೆಯಾಗುವುದು ಖಚಿತ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿ ಮನೆ ಮಾಡಿದೆ. ಹಾಲಿ ವಿಧಾನಸಭೆಯ ಅವಧಿ ಇದೇ ಶನಿವಾರ ನ 9 ಕ್ಕೆ ಮುಕ್ತಾಯವಾಗಲಿದ್ದು ಹೊಸ ರಾಜಕೀಯ ಬೆಳವಣಿಗೆಗಳ ಪ್ರಕಾರ ಆ ವೇಳೆಯೊಳೆಗೆ ಹೊಸ ಸರ್ಕಾರ ರಚನೆಯಾಗುವ ಆಶಾದಾಯಕ ಪರಿಸ್ಥಿತಿ ಕಂಡು ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟಬಹುಮತ ಬಂದಿಲ್ಲ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಮಿತ್ರಪಕ್ಷ ಶಿವಸೇನೆಯೊಂದಿಗೆ ಕೂಡಿ ಸರ್ಕಾರ ರಚನೆ ಮಾಡುವಷ್ಟು ಸರಳ ಬಹುಮತವನ್ನು ಗಳಿಸಿಕೊಂಡಿದೆ.