ಬದುಕಿನ ಇನ್ನೊಂದು ಮುಖ ಕಾಣಿಸುವ ಮಹಾದೇವ ಪಾಟೀಲರ ಗಜಲ್

ದುಡಿಯುವ ಜನರ ಬೆವರ ಹನಿಯ ಚಿತ್ತಾರವೇ ಕಾವ್ಯ 

ಎದೆಯೊಳಗೆ ಅವಿತ ನೋವಿನ ಗಾಯವೇ ಕಾವ್ಯ 

ಕಾವ್ಯವೆಂದರೆ ಈ ಜಗದ ಶ್ರಮಿಕರ ಒಡಲಾಳದ ಹಸಿವು, ಪ್ರತಿಯೊಬ್ಬನ ಅಂತರಾಳದಲ್ಲಿ ಹುದುಗಿದ ನೋವಿನ ಗಾಯ ಎಂದು ಭಾಷ್ಯ ಬರೆಯುವ ಮಹಾದೇವ ಎಸ್‌. ಪಾಟೀಲ ಮೂಲತಃ ರಾಯಚೂರಿನ ಲಿಂಗಸುಗೂರಿನವರು. ಸ್ವಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ‘ರಾಜಕೀಯದಲ್ಲಿ ರಾವಣರು’ ಎಂಬ ಸಾಮಾಜಿಕ ನಾಟಕವನ್ನು ರಚಿಸಿ, ಅದನ್ನು ಗ್ರಾಮದಲ್ಲಿ  ಪ್ರಯೋಗ ಮಾಡುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದರು. ಕಾಲೇಜು ಹಂತದಿಂದಲೇ ಕತೆ, ಕವಿತೆ, ಚುಟುಕು, ನಾಟಕಗಳ ರಚನೆಯಲ್ಲಿ ತೊಡಗಿಸಿಕೊಂಡವರು. ಮೊದಲ ಕವನ ಸಂಕಲನ ಗಾಂಧಿ ಬಜಾರ್, ಮುತ್ತಿನ ತೆನೆ ಚುಟುಕು ಸಂಕಲನ ಪ್ರಕಟಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ‘ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತದೆತ್ತಣ ಸಂಬಂಧವಯ್ಯ’ ಎನ್ನುವ ಹಾಗೆ ರಾಯಚೂರಿನ ಪೋಲೀಸ್ ಇಲಾಖೆಯಲ್ಲಿ ಆರಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಮಹಾದೇವ ಪಾಟೀಲ, ಲಾಟಿ ಏಟು, ಬೂಟಿನ ಸದ್ದಿನಲ್ಲಿ ಕಳೆದುಹೋಗದೆ ಗಜಸಿಲ್ ಗುಂಗಿನಲ್ಲಿ ಮುಳುಗಿ ‘ಬಿಸಿಲು ಬಿದ್ದ ರಾತ್ರಿ’ ಎಂಬ ಚೊಚ್ಚಲ ಗಜಸಿಲ್ ಸಂಕಲನ ಪ್ರಕಟಿಸಿದ್ದಾರೆ ಎಂದರೆ ಅದು ಅಚ್ಚರಿಯೇ ಸರಿ. ಅನಂತರ ‘ಸುಡುವ ತಂಗಾಳಿ’ ಎಂಬ ಮತ್ತೊಂದು ಗಜಲ್ ಸಂಕಲನ ಹೊರ ತಂದಿದ್ದಾರೆ. ಮಧುರ ಪ್ರೀತಿ, ವಿರಹದ ನೆನಪು, ಯೌವ್ವನದ ಆಟಾಟೋಪ, ದನಿ ಕಳೆದುಕೊಂಡವರ ನೋವು, ಹಳೆಯ ಗಾಯಗಳ ಮೆಲುಕು, ಸುತ್ತಮುತ್ತಲಿನ ವಿದ್ಯಮಾನಗಳಿಗೆ ಕಿವಿಯಾಗುವ ಇವರ ಗಜಸಿಲ್‌ಗಳು ವಿಭಿನ್ನತೆಯಲ್ಲಿ ಓದುಗರನ್ನು ಸೆಳೆಯುತ್ತವೆ. ನಾಡಿನ ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ, ಗಜಲ್ ವಾಚನ ಮಾಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. 

                                         ಗಜಲ್ 

ಮನುಜ ಒಬ್ಬರಾದ ಮೇಲೆ ಒಬ್ಬರು ನಿರ್ಗಮಿಸಬೇಕು ಇಲ್ಲಿಂದ 

ಚಿಗುರಿದ ಮೇಲೆ ಹೂ, ಕಾಯಿ, ಹಣ್ಣಾಗಿ ಉದುರಬೇಕು ಇಲ್ಲಿಂದ 

ಗೂಟ ಬಡಿದು ಇಲ್ಲಿಯೇ ತಳವೂರಲು ಇದು ಸ್ವಂತ ಮನೆಯಲ್ಲ 

ಅನಾಮಿಕ ಕೊಟ್ಟ ವರ​‍್ರಸಾದ ತಿಂದು ಹೋಗಬೇಕು ಇಲ್ಲಿಂದ 

ಸತ್ತಾಗ ಐದಿಡಿ ಮಣ್ಣಾಕಿ ಮರೆಯುವುದು ಮನುಕುಲದ ಸ್ವಭಾವ 

ನನ್ನವರೆಂದು ಯಾರೂ ಬರುವುದಿಲ್ಲ ಒಂಟಿಯಾಗಿ ಜಾರಬೇಕು ಇಲ್ಲಿಂದ 

ರಾಜನಾದರೇನು, ಯೋಗಿಯಾದರೇನು, ಭೋಗಿಯಾದರೇನು? 

ಕಾಲಮುಗಿದ ಮೇಲೆ ಯಾರಿಗೂ ಕಾಣದಂತೆ ಕಣ್ಮರೆಯಾಗಬೇಕು ಇಲ್ಲಿಂದ 

ಸತ್ಯಗೆದ್ದು ಜಯಿಸಬಹುದು, ಮೃತ್ಯು ಗೆದ್ದು ಯಾವತ್ತೂ ಜಯಿಸಲಾಗದು 

‘ಮಹಾದೇವ’ ಸಿದ್ಧನಾಗು ಗಂಟುಮೂಟೆ ಕಟ್ಟಿಕೊಂಡು ಸಾಗಬೇಕು ಇಲ್ಲಿಂದ 

                                                                                            - ಮಹಾದೇವ ಎಸ್‌. ಪಾಟೀಲ  

‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು, ಕಡಲು ನಿನ್ನದೇ ಹಡಗೂ ನಿನ್ನದೇ ಮುಳುಗದಿರಲಿ ಬದುಕು’ ಎಂದು ಕವಿ ಭಾವಪೂರ್ಣವಾಗಿ ಜಗನ್ನಿಯಾಮಕನ ಬಳಿ ಕೋರಿಕೊಂಡರೂ ಜೀವದ ಹಣತೆಯಲ್ಲಿ ತೈಲ ತೀರಿ ಬೆಳಕು ಆರಿ ಹೋಗುವುದು. ಕಡಲಿನಲ್ಲಿ ಸಾಗುವ ಬದುಕಿನ ಹಡಗು ಬಿರುಗಾಳಿಗೆ ಸಿಕ್ಕು ಒಮ್ಮೆ ಮುಳುಗಿ ಹೋಗುವುದು. ಸಾವನ್ನು ಯಾವುದೇ ಕಾರಣಕ್ಕೂ ಬಾರದಂತೆ ತಡೆ ಹಿಡಿಯಲು ಸಾಧ್ಯವಿಲ್ಲ. ಹುಟ್ಟಿದ ಪ್ರತಿ ಜೀವಿಗೂ ಸಾವು ಕಟ್ಟಿಟ್ಟ ಬುತ್ತಿ. ಇಂದು ಅವರು ಹೋದರೆ, ನಾಳೆ ನಮ್ಮ ಪಾಳಿ. ಕಾಲನ ಕರೆ ಬಂದಾಗ ಮರುಮಾತನಾಡದೆ ಬಿರಬಿರನೆ ಅವನ ಹಿಂದೆ ತೆರಳುವುದಷ್ಟೇ ನಮ್ಮ ಕೆಲಸ. ಆದರೆ ಹುಟ್ಟು ಸಾವಿನ ಮಧ್ಯೆ ನಾವು ಮಾಡಬೇಕಾದ ಕಾರ್ಯಗಳಿವೆಯಲ್ಲ ಅವು ಲೋಕ ನೆನಪಿಸಿಕೊಳ್ಳುವಂತಿರಬೇಕು. ನಮ್ಮ ನಂತರವೂ ಧನ್ಯತೆಯಿಂದ ನಮ್ಮ ಹೆಸರನ್ನು ಸ್ಮರಿಸಿಕೊಳ್ಳುವಂತಿರಬೇಕು. ಅದೇ ಬದುಕಿನ ಸಾರ್ಥಕತೆ. ಈ ಗಜಲ್‌ನಲ್ಲಿ ಮಹಾದೇವ ಎಸ್‌. ಪಾಟೀಲ ಅವರು ಬದುಕಿನ ನಶ್ವರತೆಯ ಬಗ್ಗೆ ಹೇಳ ಹೊರಡುತ್ತಾರೆ. ನೀನು ಏನೆಲ್ಲ ತಿಪ್ಪರಲಾಗ ಹಾಕಿ ನಗ, ನಾಣ್ಯ, ಆಸ್ತಿ, ಅಂತಸ್ತು ಕೂಡಿಟ್ಟರೂ ಎಲ್ಲ ಬಿಟ್ಟು ಒಮ್ಮೆ ಹೋಗಲೇಬೇಕು ಎನ್ನುವ ವಾಸ್ತವವನ್ನು ದಾಟಿಸುತ್ತಾರೆ. 

ಬದುಕಿನ ಅಂತಿಮ ನಿಲ್ದಾಣ ಮರಣ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಸಾವಿಗೆ ಶರಣಾಗಲೇಬೇಕು. ಸಾವನ್ನು ಗೆದ್ದವನು ಈ ಭೂಮಿಯ ಮೇಲೆ ಯಾವೊಬ್ಬನೂ ಇಲ್ಲ. ಯಮನ ಪಾಶ ಪ್ರತಿಯೊಬ್ಬನ ಕೊರಳಿಗೆ ಉರುಳಾಗಲೇಬೇಕು. ಮಹಾದೇವ ಪಾಟೀಲರು ಕೂಡ ಇಲ್ಲಿ ಅದನ್ನೇ ಹೇಳ ಹೊರಡುತ್ತಾರೆ. ಒಬ್ಬರ ನಂತರ ಒಬ್ಬರು ತೆರಳಲೇಬೇಕು ಈ ಲೋಕ ಬಿಟ್ಟು, ಚಿಗುರಿದ ಮೇಲೆ ಹೂವಾಗಿ, ಕಾಯಾಗಿ, ಹಣ್ಣಾಗಿ ಕಳಚಿಕೊಳ್ಳಲೇಬೇಕು ಇಲ್ಲಿಂದ. ಇಲ್ಲಿಯೇ ಇರುತ್ತೇನೆ ಎಂದು ಹಠ ಹಿಡಿದು ಕೂರುವಂತಿಲ್ಲ, ಏಕೆಂದರೆ ಕವಿಗಳು ಹೇಳಿದ ಹಾಗೆ ‘ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ’. ಇದು ಬಾಡಿಗೆ ಮನೆ ಮೇಲಿದೆ ನಮ್ಮ ಸ್ವಂತ ಮನೆ. ಯಾರೋ ಕೊಟ್ಟ ಈ ಬದುಕಿನ ಭಿಕ್ಷೆ ಸವಿದು ಸುಮ್ಮನೆ ಹೋಗಬೇಕು. ಉಸಿರು ನಿಂತ ಮೇಲೆ ಏನಿದೆ, ಮಣ್ಣಲ್ಲಿ ಮಣ್ಣಾಗುವುದು ತಾನೆ. ಮಣ್ಣಲ್ಲಿ ಮಣ್ಣು ಮಾಡಿ ಮರೆತುಬಿಡುವುದು ಈ ಮನುಕುಲದ ಸ್ವಭಾವ. ಜೀವಕ್ಕೆ ಜೀವ ಎಂದು ಬಿಗಿದಪ್ಪಿದವರೂ ನಮ್ಮ ಜೊತೆ ಬರುವುದಿಲ್ಲ, ಒಬ್ಬಂಟಿಯಾಗಿಯೇ ತೆರಳಬೇಕು. ಇಲ್ಲಿ ರಾಜ, ಯೋಗಿ, ಭೋಗಿ ಎಲ್ಲರಿಗೂ ಒಂದೇ ನಿಯಮ. ಸತ್ತ ನಂತರ ಸಮಾಧಿ, ಬಾಯಲ್ಲಿ ಮೂರು ಹಿಡಿ ಮಣ್ಣು. ಸತ್ಯ ಗೆದ್ದು ಬೀಗಬಹುದು ಮನುಷ್ಯರು, ಆದರೆ ಸಾವು ಜಯಿಸಿ ಬೀಗಿದವರಿಲ್ಲ. ನಾಳೆ ಬರುವ ಸಾವಿಗೆ ಇಂದೇ ಸಿದ್ಧನಾಗು ಮನುಷ್ಯನೇ. ಯಾವುದೇ ವಾಂಛೆಗಳನ್ನಿಟ್ಟುಕೊಂಡು, ಸಂಬಂಧಗಳ ಮೇಲೆ ಮೋಹವನ್ನಿಟ್ಟುಕೊಂಡು ಬರಲಾರೆನೆಂದು ಹಠ ಹಿಡಿಯದಿರು. ಸಾವು ಎನ್ನುವುದು ಶಾಶ್ವತ ಸತ್ಯ, ಅದನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಎದೆಗಾರಿಕೆ ನಮಗಿರಬೇಕಾಗುತ್ತದೆ. 

ಬೇಂದ್ರೆಯವರು ಹೇಳುವಂತೆ ‘ಹುಸಿನಗುತ ಬಂದೇವ, ತುಸುನಗುತ ತೆರಳೋಣ, ಬಡನೂರು ವರುಷಾನ ಹರುಷಾದಿ ಕಳೆಯೋಣ, ಯಾಕಾರೆ ಕೆರಳೋಣ?’ ಹೌದು, ಹುಟ್ಟು ಸಾವುಗಳು ನಮ್ಮ ಕೈಲಿಲ್ಲ. ನಮ್ಮ ಕೈಯಲ್ಲಿರುವುದು ಇರುವಷ್ಟು ದಿನ ಎಲ್ಲರಿಗೂ ಬೇಕಾಗಿ ಬದುಕುವುದು. ನಮ್ಮ ಅನುಪಸ್ಥಿತಿ ಇನ್ನೊಬ್ಬರ ಕಣ್ಣೊಳಗೆ ಸಣ್ಣ ಕಣ್ಣ ಹನಿ ಮೂಡಿಸಿತೆಂದರೆ ಜೀವನದ ಸಾರ್ಥಕತೆ ಸದೇ. ಸಾವು ಯಾವಾಗಲಾದರೂ ಬರಲಿ, ಸ್ವಾಗತಿಸಲು ಸಿದ್ಧರಾಗೋಣ. ಈ ಭಾವವನ್ನು ತಮ್ಮ ಗಜಲ್‌ನಲ್ಲಿ ತೆರೆದಿಟ್ಟ ಕವಿ ಮಹಾದೇವ ಪಾಟೀಲರಿಗೆ ಕೃತಜ್ಞತೆಗಳು.  

- * * * -