ಮುಂಬೈ, ನ 12 : 'ಏಕ್ ದೋ ತೀನ್..' ಎಂದು ನರ್ತಿಸಿ ಚಿತ್ರ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರಿಗೆ ಆ ಹಾಡು ಹಾಗೂ ಹೊಸ ಗುರುತನ್ನು ನೀಡಿದ 'ತೇಜಾಬ್' ಚಿತ್ರ ಪ್ರದರ್ಶನಗೊಂಡು 31 ವರ್ಷಗಳು ಸಂದಿವೆ. 1988ರಲ್ಲಿ ಪ್ರದರ್ಶನಗೊಂಡ ಎನ್.ಚಂದ್ರ ನಿರ್ದೇಶನದ ತೇಜಾಬ್ ಚಿತ್ರದಲ್ಲಿ ಅನಿಲ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿದ್ದರು. ಈ ಚಿತ್ರದ ನೆನಪಿಗಾಗಿ ಮಾಧುರಿ ದೀಕ್ಷಿತ್ ಇತ್ತೀಚೆಗೆ ಚಿತ್ರದ 'ಏಕ್ ದೋ ತೀನ್ ' ಹಾಡಿಗೆ ಹೆಜ್ಜೆ ಹಾಕಿದ್ದು, ಅದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅದನ್ನು ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿನಲ್ಲಿ ಬಾಲಿವುಡ್ ನ ಧಕ್ ಧಕ್ ಹುಡುಗಿ ಎಲ್ಲರ ಮನಸೂರೆಗೊಂಡಿದ್ದಾರೆ. ಈ ವಿಡಿಯೋ ಅನ್ನು ಷೇರ್ ಮಾಡಿರುವ ಮಾದುರಿ, ಈ ಹಾಡು ನನಗೆ ಅತ್ಯಂತ ವಿಶೇಷವಾಗಿದೆ. ಆದ್ದರಿಂದ ಚಿತ್ರ 31 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.