ಚೆನ್ನೈ, ಏ 17,ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ತಿಳಿಸಿದ್ದಾರೆ.ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಮಾತನಾಡಿರುವ ಕೇದಾರ್ ಜಾಧವ್, ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಂದು ಹಂತಕ್ಕೆ ತಲುಪಲು ಎಂ.ಎಸ್ ಧೋನಿ ನನಗೆ ಸಾಕಷ್ಟು ನೆರವಾಗಿದ್ದಾರೆ. ಹಾಗಾಗಿ , ಅವರು ನನ್ನ ನೆಚ್ಚಿನ ಕ್ರಿಕೆಟಿಗರಾಗಿ ಉಳಿದಿದ್ದಾರೆ ಎಂದು ಹೇಳಿದ್ದಾರೆ. "ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರೊಂದಿಗೆ ಭಾರತದ ಪರ ಒಂದೇ ಒಂದು ಪಂದ್ಯವಾಡಲಿಲ್ಲವೆಂಬ ಬೇಸರ ನನಗಿದೆ. ಆದರೆ, ನಾನು ಎಂ.ಎಸ್.ಧೋನಿಯನ್ನು ಭೇಟಿಯಾದಾಗ ಅವರು ತುಂಬಾ ಕಟ್ಟುನಿಟ್ಟಿನ ವ್ಯಕ್ತಿ ಎಂದು ಭಾವಿಸಿದೆ. ಐಪಿಎಲ್‌ನಲ್ಲಿ ಅವರ ವಿರುದ್ಧ ಅನೇಕ ಪಂದ್ಯಗಳನ್ನು ಆಡಿದ್ದೇನೆ. ಆದರೆ, ಅವರನ್ನು ಭೇಟಿಯಾದ ನಂತರ, ನನ್ನ ನೆಚ್ಚಿನ ಕ್ರಿಕೆಟಿಗನ ಬಗ್ಗೆ ಯಾರಾದರೂ ಕೇಳಿದಾಗ ನನ್ನ ಮನಸ್ಸಿನಲ್ಲಿ ಧೋನಿ ಬಿಟ್ಟು ಬೇರೆ ಯಾರ ಹೆಸರು ನೆನಪಾಗುವುದಿಲ್ಲ," ಎಂದು ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಜಾಧವ್ ಹೇಳಿದ್ದಾರೆ.