ಮೈಸೂರು, ಫೆ.1, ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಲಘು ಹೃದಯಾಘಾತದ ಹಿನ್ನೆಲೆಯಲ್ಲಿ ಅವರಿಗೆ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಕೆ ಮಾಡಿದೆ.ನಿನ್ನೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆತರಲಾಯಿತು. ತುರ್ತು ಚಿಕಿತ್ಸಾ ವಿಭಾಗದಲ್ಲಿ ಈಗ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ಮಾಜಿ ಸಚಿವರೂ ಆಗಿದ್ದು, ಈಗಿನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕೆಲವು ದಿನಗಳ ಹಿಂದೆಯಷ್ಟೇ ಇಚ್ಛೆ ವ್ಯಕ್ತಪಡಿಸಿದ್ದರು.