1.50 ಕೋಟಿ ರೂ ಸವಳು ಜವಳು ನಿರ್ಮೂಲನಾ ಯೋಜನೆಗೆ ಶಾಸಕ ಹುಕ್ಕೇರಿ ಚಾಲನೆ

MLA Hukkeri launches Rs 1.50 crore wildlife eradication project

1.50 ಕೋಟಿ ರೂ ಸವಳು ಜವಳು ನಿರ್ಮೂಲನಾ ಯೋಜನೆಗೆ ಶಾಸಕ ಹುಕ್ಕೇರಿ ಚಾಲನೆ 

ಚಿಕ್ಕೋಡಿ, 12;  ತಾಲೂಕಿನ ಕೃಷ್ಣಾ ನದಿ ತೀರದ ಇಂಗಳಿ ಗ್ರಾಮದಲ್ಲಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸಿ, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1.50 ಕೋಟಿ ರೂ ವೆಚ್ಚದ ಸವಳು ಜವಳು ನಿರ್ಮೂಲನಾ ಯೋಜನೆಗೆ ಶಾಸಕರಾದ ಗಣೇಶ ಹುಕ್ಕೇರಿ ಅವರು ಭೂಮಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು. ಈ ಯೋಜನೆಯಡಿ ನೂರಾರು ಹೆಕ್ಟೇರ್ ಕೃಷಿ ಭೂಮಿಯ ಫಲವತ್ತತೆ ಹೆಚ್ಚುತ್ತಿದ್ದು, 408 ರೈತರು ನೇರ ಲಾಭ ಪಡೆಯಲಿದ್ದಾರೆ. ಕೃಷಿ ಭೂಮಿಯಲ್ಲಿ ನಿಂತ ನೀರನ್ನು ಪೈಪ್ಲೈನ್ ಮೂಲಕ ಹೊರತೆಗೆದು, ನೀರಿನ ಅತಿಯಾದ ಸಂಗ್ರಹದಿಂದ ಉಂಟಾಗುವ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರೈತ ಮುಖಂಡ ಬಾಬು ಮಿರ್ಜೆ ಮಾತನಾಡಿ, "ಈ ಹಿಂದೆ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರು ಇಂಗಳಿ ಗ್ರಾಮದಲ್ಲಿ ಸವಳು ಜವಳು ನಿರ್ಮೂಲನಾ ಯೋಜನೆ ಅಳವಡಿಸಿ, ಸಾವಿರಾರು ಎಕರೆ ಕೃಷಿ ಭೂಮಿಗೆ ಲಾಭ ಕಲ್ಪಿಸಿದ್ದಾರೆ. ಇದರಿಂದ ಪ್ರತಿ ಎಕರೆಗೆ 40 ರಿಂದ 50 ಟನ್ ಕಬ್ಬು ಬೆಳೆಯುವಂತಾಗಿದೆ. ರೈತರು ಈ ಯೋಜನೆಗೆ ಸಹಕರಿಸಿ, ನೀರನ್ನು ಮಿತವಾಗಿ ಬಳಸಬೇಕು ಹಾಗೂ ಜಮೀನಿನ ಫಲವತ್ತತೆ ಕಾಪಾಡಿಕೊಳ್ಳಬೇಕು" ಎಂದು ರೈತರಲ್ಲಿ ಮನವಿ ಮಾಡಿದರು. ಈ ವೇಳೆ ಚಿಕ್ಕೋಡಿ ಕೃಷಿ ಅಧಿಕಾರಿ ಪ್ರಶಾಂತ ಹೂಲಮನಿ ಮಾತನಾಡಿ ಈ ಯೋಜನೆಯಡಿ ಕೃಷಿ ಭೂಮಿಯಲ್ಲಿ ನಿಂತ ನೀರನ್ನು ಸುಗಮವಾಗಿ ನಿರ್ವಹಿಸುವ ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ, ಬೆಳೆ ಬೆಳವಣಿಗೆಯನ್ನು ಉತ್ತೇಜಿಸಲಾಗುತ್ತದೆ. ನೀರಿನ ಅತಿಯಾದ ಸಂಗ್ರಹದಿಂದ ಉಂಟಾಗುವ ಸಮಸ್ಯೆ ತಪ್ಪಿಸಿ, ಮಣ್ಣಿನ ಒತ್ತಡ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ರೈತರ ಬೆಳೆ ಹಾನಿ ತಡೆಯಲು, ಹೆಚ್ಚು ಉತ್ಪಾದಕತೆ ಹೊಂದುವಂತೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.  ನೀರಾವರಿ ವ್ಯವಸ್ಥೆಯನ್ನು ಸಮರ್ಥವಾಗಿ ರೂಪಿಸುವ ಮೂಲಕ ಭವಿಷ್ಯದಲ್ಲಿ ನೀರಿನ ಬಳಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, ನೀರಿನ ದುರ್ಬಳಕೆ ತಪ್ಪಿಸಲು ಹಾಗೂ ರೈತರಿಗೆ ಸುಗಮ ಮತ್ತು ಸ್ಥಿರ ನೀರಾವರಿ ವ್ಯವಸ್ಥೆ ಒದಗಿಸಲು ಈ ಯೋಜನೆ ನೆರವಾಗಲಿದೆ ಎಂದು ರೈತರಲ್ಲಿ ಯೋಜನೆಯ ಬಗ್ಗೆ ಅರಿವು ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಗಣಪತಿ ಧನವಾಡೆ, ಮಹಾದೇವ ಜಾಧವ, ರಾಜಾರಾಮ ಮಾನೆ, ಅಣ್ಣಾಸಾಬ ದಾವಾಡೆ, ಸಂಜಯ ಕುಡಚೆ, ಹೂವನ್ನ ಚೌಗಲಾ, ಅಪ್ಪಾಸಾಬ ಮಿರ್ಜೆ, ರಮೇಶ ಮುರಚಿಟ್ಟೆ, ಚಂದ್ರು ಲಂಗೋಟೆ, ಅಜೀತ ಚಿಗರೆ, ಶಿವಾಜಿ ಪವಾರ, ಸುಭಾಷ ಉನ್ನಾಳೆ, ಗಜಾನನ ಮಗದುಮ್ಮ, ಶಶಿ ಧನವಾಡೆ, ವಿಶಾಲ ಕುಡಚೆ, ಶಾಂತಿನಾಥ ಪಣದೆ, ಆನಂದ ಕಾಂಬಳೆ, ರಾಮಜಿ ಕಾಂಬಳೆ, ಬಸವರಾಜ ಚೌಗಲಾ, ಸೇರಿದಂತೆ ನೂರಾರು ರೈತ ಫಲಾನುಭವಿಗಳು ಉಪಸ್ಥಿತರಿದ್ದರು.ಪೋಟೋ: ಚಿಕ್ಕೋಡಿ: ಸವಳು ಜವಳು ನಿರ್ಮೂಲನೆ ಕಾರ್ಯಕ್ರಮಕ್ಕೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.