ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ
ಚಿಕ್ಕೋಡಿ, 07 : ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ವಿಶೇಷ ಪ್ರಯತ್ನದ ಫಲವಾಗಿ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರಾಗಿದೆ. ಇದರಿಂದ ರಾಯಬಾಗ ಕ್ಷೇತ್ರದ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕರೋಶಿ, ಕಮತೇನಟ್ಟಿ, ಮಾಂಗನೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಈಗಾಗಲೇ ಕರೋಶಿ ಮತ್ತು ಮುಗಳಿ ಹತ್ತಿರ ಇದ್ದ 33 ಕೆವ್ಹಿ ವಿದ್ಯುತ್ ವಿತರಣೆ ಕೇಂದ್ರ ಚಾಲ್ತಿಯಲ್ಲಿತ್ತು. ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರ ಹೊಸ ವಿದ್ಯುತ್ ವಿತರಣಾ ಕೇಂದ್ರ ಮಂಜೂರು ಮಾಡಿರುವುದು ಅನುಕೂಲವಾಗಿದೆ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹತ್ತರವಾಟದಲ್ಲಿ ಸ್ವಲ್ಪ ನೀರಿನ ಸಮಸ್ಯೆ ಎದುರಾಗಿತ್ತು. ಕೂಡಲೇ ಸಿಡಲಹೊಂಡ ಕೆರೆ ಹತ್ತಿರ ಬಾವಿ ತೋಡಿಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಜೈನಾಪೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ ಎಂದರು.
ತಾಲೂಕಿನ ಕರೋಶಿ, ಕಮತೇನಟ್ಟಿ, ಮಾಂಗನೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸುಮಾರು 45 ಲಕ್ಷ ರೂ ಅನುದಾನ ಮಂಜೂರಾಗಿದೆ. ಗ್ರಾಮಸ್ಥರು ಮುಂದೆ ನಿಂತು ಕಾಮಗಾರಿಗೆ ಸಹಕಾರ ಕೊಡಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
ಕರೋಶಿ ಗ್ರಾಮ ವ್ಯಾಪ್ತಿಯ ಗಟ್ಟಿ ಬಸವೇಶ್ವರ ದೇವಸ್ಥಾನ ಹತ್ತಿರ ತೋಟಪಟ್ಟಿ ಮಕ್ಕಳಿಗೆ ಅನುಕೂಲವಾಗಲು 25 ಲಕ್ಷ ರೂ ವೆಚ್ಚದ ಅಂಗನವಾಡಿ ಕೇಂದ್ರ ಮಂಜೂರಾಗಿದೆ. ಪಾಲಕರು ಅಂಗನವಾಡಿಗೆ ಮಕ್ಕಳನ್ನು ಸೇರಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅದರಂತೆ ಕಮತೇನಟ್ಟಿ ಗ್ರಾಮದಲ್ಲಿ ಗದಗಿಸಿದ್ದೆಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ಅನುದಾನ ನೀಡಲಾಗಿದೆ. ಮಾಂಗನೂರ ಗ್ರಾಮದ ಮರಗೂಬಾಯಿ ದೇವಸ್ಥಾನದ ಹತ್ತಿರ ಸಿಸಿ ರಸ್ತೆ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ಮತ್ತು ಬಸ್ ನಿಲ್ದಾಣಕ್ಕೆ 5 ಲಕ್ಷ ರೂ ಅನುದಾನ ಒದಗಿಸಲಾಗಿದೆ. ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಗ್ರಾಮ ಪಂಚಾಯತ್ ಅಧ್ಯಕ್ಷ ಪಂಚಾಕ್ಷರಿ ಹಳಜೋಳೆ, ವಾಸುದೇವ ಕುಲಕರ್ಣಿ, ವಿಜಯ ಕೊಠಿವಾಲೆ, ಹಸನ ಸನದಿ, ದುಂಡಯ್ಯ ಪೂಜಾರಿ, ಕಲ್ಲಪ್ಪ ಕುರಬರ, ಏಕನಾಥ ಜೇಧೆ, ಸಂತೋಷ ಅಂಬಲೆ, ಸಿಡಿಪಿಓ ಸಂತೋಷ ಕಾಂಬಳೆ, ಇಂಜನೀಯರ ಎಸ್.ಎಸ್.ಹೊಸಮನಿ ಮುಂತಾದವರು ಇದ್ದರು.