ಲಕ್ನೋ, ಫೆ ೭, ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಹಿಂದೂ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ರಂಜೀತ್ ಬಚ್ಚನ್ ಹತ್ಯೆ ಪ್ರಕರಣವನ್ನು ಭೇದಿಸಿರುವ ಲಕ್ನೋ ಪೊಲೀಸರು, ಕೊಲೆಗೀಡಾದ ರಂಜೀತ್ ಬಚ್ಚನ್ ನ ಎರಡನೆಯ ಪತ್ನಿ ಸೇರಿ ಮೂವರನ್ನು ಗುರುವಾರ ಬಂಧಿಸಿದ್ದಾರೆ. ವಿಶ್ವ ಹಿಂದೂ ಮಹಾಸಭಾ ಸಂಸ್ಥಾಪಕ ಬಚ್ಚನ್ (೪೦) ಎಂಬುವರನ್ನು ಲಕ್ನೋದ ಅತಿ ಭದ್ರತಾ ವಲಯವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಸಂಕೀರ್ಣದ ಬಳಿ ಫೆಬ್ರವರಿ ೨ ರಂದು ಬೆಳಗಿನ ವಾಯು ವಿಹಾರ ನಡೆಸುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಿ, ಜೊತೆಗಿದ್ದ ಆತನ ಸೋದರ ಸಂಬಂಧಿ ಅದಿತ್ಯಾ ಶ್ರೀವಾಸ್ತವ ಮೇಲೂ ಗುಂಡು ಹಾರಿಸಿ ಗಾಯಗೊಳಿಸಲಾಗಿತ್ತು.
ಬಚ್ಚನ್ ಹಾಗೂ ಆತನ ಎರಡನೇ ಪತ್ನಿ ಶ್ರೀಮತಿ ಶ್ರೀವಾಸ್ತವ ನಡುವಣ ದಾಂಪತ್ಯ ಕಲಹದ ಫಲಶೃತಿಯಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಇಲಾಖೆಯಲ್ಲಿ ಕ್ಲರ್ಕ್ ಆಗಿರುವ ಶ್ರೀಮತಿಗೆ ನಾಲ್ಕು ವರ್ಷದ ಮಗುವಿದ್ದು, ಕಳೆದ ಮೂರು ವರ್ಷಗಳಿಂದ ಬಚ್ಚನ್ ನಿಂದ ಪ್ರತ್ಯೇಕಗೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಮತಿ ಶ್ರೀವಾಸ್ತವ, ದೀಪೇಂದ್ರ ಎಂಬುವನೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಅವರಿಬ್ಬರು ಮದುವೆ ಮಾಡಿಕೊಳ್ಳಲು ಬಯಸಿದ್ದರು.
ಪೊಲೀಸರ ಪ್ರಕಾರ ಬಚ್ಚನ್ ಹಲವು ವರ್ಷಗಳ ಹಿಂದೆಯೇ ವಿವಾಹವಾಗಿದ್ದು, ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ. ಈ ವಿಷಯವನ್ನು ಮರೆ ಮಾಚಿ ೨೦೧೫ ಜನವರಿ ೧೫ ರಂದು ಶ್ರೀಮತಿ ಶ್ರೀವಾಸ್ತವ ಅವರನ್ನು ವಿವಾಹವಾಗಿದ್ದ, ಸತ್ಯಾಂಶ ಗೊತ್ತಾದ ನಂತರ ಎರಡನೇ ಪತ್ನಿ ಬಚ್ಚನ್ ನನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದಳು. ಆದರೆ, ಜನವರಿ ೧೭ ರಂದು ಎರಡನೆ ಪತ್ನಿಯ ಮನೆಗೆ ಭೇಟಿ ನೀಡಿದ್ದ ಬಚ್ಚನ್, ಜನವರಿ ೧೮ ರಂದು ವಿವಾಹ ದಿನೋತ್ಸವ ಆಚರಿಸಿಕೊಳ್ಳೊಣ ಎಂದು ಒತ್ತಾಯಿಸಿದ್ದ ಆದರೆ, ಆಕೆ ನಿರಾಕರಿಸಿದ್ದಳು ಇದರಿಂದ ಕುಪಿತಗೊಂಡಿದ್ದ ಬಚ್ಚನ್ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಹಲ್ಲೆಯನಂತರ ಶ್ರೀ ವಾಸ್ತವ ಹಾಗೂ ದಿಪೇಂದ್ರ ಕುಮಾರ್ ಬಚ್ಚನ್ ಹತ್ಯೆಗೆ ಸಂಚು ರೂಪಿಸಿದ್ದರು, ಕುಮಾರ್ ವಾಹನ ಚಾಲಕ ಸಂಜೀತ್ ಗೌತಮ್ ಹಾಗೂ ಸೋದರ ಸಂಬಂಧಿ ಜಿತೇಂದ್ರ ಅವರಿಗೆ ತರಬೇತಿ ನೀಡಿ ಫೆಬ್ರವರಿ ೨ ರಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.