ಧಾರವಾಡ 02 : ವಿಶ್ವದ ವಿಭು ಶಿವನ ಧ್ಯಾನಸ್ಥ ಮನಸ್ಸಿನ ಸಕಲ ಸಂಕಲ್ಪಗಳನ್ನೂ ನಿಖರ ನೆಲೆಯಲ್ಲಿ ಪೂರ್ಣಗೊಳಿಸಿದ ಶ್ರೀವೀರಭದ್ರನು ಶಿವನ ಸಂಪ್ರೀತಿಗೆ ಪಾತ್ರನಾಗಿದ್ದಾನೆ. ಹಾಗಾಗಿ ಶಿವನ ಕೃಪಾನುಗ್ರಹ ಪಡೆದ ಶ್ರೀವೀರಭದ್ರ ದೇವರು ಶಿವನಷ್ಟೇ ಅಪಾರ ಶಕ್ತಿಶಾಲಿ ಆಗಿದ್ದಾರೆ ಎಂದು ಶ್ರೀಶೈಲ ಸೂರ್ಯ ಪೀಠದ ಶ್ರೀಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ರಾಯಚೋಟಿಯ ಶ್ರೀಭದ್ರಕಾಳಿ ಸಮೇತ ವೀರಭದ್ರ ದೇವರ ಬ್ರಹ್ಮೋತ್ಸವ-2025ರ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧರ್ಮ ಚಿಂತನ ಸಮಾವೇಶದ ಸಾನ್ನಿಧದ್ಯವಹಿಸಿ ಆಶೀರ್ವಚನ ನೀಡಿದರು. ದುಷ್ಟರ ನಿಗ್ರಹ ಹಾಗೂ ಶಿಷ್ಟರ ರಕ್ಷಣೆಗೆ ಶ್ರೀವೀರಭದ್ರ ದೇವರ ಅವತಾರವಾಗಿದೆ. ಮಾನನವನ ದುರಹಂಕಾರವನ್ನು ದಮನ ಮಾಡಿ ಸತ್ಯ, ಶುದ್ಧ, ಸಾತ್ವಿಕ ಸಜ್ಜನಿಕೆಯ ಉನ್ನತ ಜೀವನ ವಿಧಾನದೊಂದಿಗೆ ಮನುಕುಲವನ್ನು ಮುನ್ನಡೆಸುವಲ್ಲಿ ಅಗತ್ಯವಾದ ವಿಶಿಷ್ಟ ಶಕ್ತಿಸಂಚಯವನ್ನು ಶಿವನಿಂದ ಪಡೆದುಕೊಂಡ ಏಕೈಕ ದೈವವಾಗಿ ಶ್ರೀವೀರಭದ್ರ ದೇವರು ಗಮನಸೆಳೆಯುತ್ತಾರೆ. ಆತ್ಮಸಾಕ್ಷಿಗೆ ವಿರುದ್ಧವಾದ ಪೈಶಾಚಿಕ ಬದುಕನ್ನು ಶ್ರೀವೀರಭದ್ರನು ಎಂದೂ ಒಪ್ಪುವದಿಲ್ಲ ಎಂಬುದನ್ನು ಶ್ರೀವೀರಭದ್ರ ದೇವರ ಸಮಸ್ತ ಭಕ್ತ ಸಂಕುಲ ಮನಗಾಣಬೇಕು ಎಂದೂ ಶ್ರೀಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸ್ಪಷ್ಟಪಡಿಸಿದರು.
ಸಮಾವೇಶ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಅಶೋಕಕುಮಾರ ಮಾತನಾಡಿ, ಮನುಷ್ಯ ಸಮಾಜದ ಆಸ್ತಿಯಾಗಲು ಪ್ರಯತ್ನಿಸಬೇಕು. ಅನ್ಯಥಾ ಜನವಿರೋಧಿ ಕೃತ್ಯಗಳಲ್ಲಿ ಮಾನವನ ಇಹದ ಬದುಕು ವ್ಯರ್ಥಗೊಳ್ಳಬಾರದು ಎಂದರು.
ಬಾಗಲಕೋಟ ಜಿಲ್ಲೆ ಜಮಖಂಡಿ ಕಲ್ಯಾಣಮಠದ ಶ್ರೀಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹಾಗೂ ರಾಯಚೂರು ಜಿಲ್ಲೆ ನೀಲಗಲ್ಲ ಬೃಹನ್ಮಠದ ಶ್ರೀರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು.
ಕಲಬುರ್ಗಿಯ ಸಿ.ಎಂ. ಶಿವಶರಣಪ್ಪ, ಹುಬ್ಬಳ್ಳಿ-ಧಾರವಾಡದ ಗೀರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ವಕೀಲ ಪ್ರಕಾಶ ಅಂದಾನಿಮಠ, ಎಂ.ಐ. ದೇಶನೂರ, ರಾಚಯ್ಯ ಮಠಪತಿ, ಅನಿಲ ಉಳ್ಳಾಗಡ್ಡಿ, ರಮೇಶಕುಮಾರ ಬುಡರಕಟ್ಟಿಮಠ, ಗೋವಾದ ಶಿವು ಹಿರೇಮಠ, ಗುರುಮೂರ್ತಿ ಯರಗಂಬಳಿಮಠ, ಜಗದೀಶ ಪುರಾಣಿಕಮಠ, ಚಂದ್ರಯ್ಯ ಸಿದ್ಧಗಿರಿಮಠ, ಶಿವುಕುಮಾರ ಚಿಕ್ಕಮಠ, ಮಹೇಶ ಸೂಡಿ, ವೀರೂ ಸಾಲಿಮಠ, ಮಹಾಂತೇಶ ಹಿರೇಮಠ, ದೇವಾಲಯ ಟ್ರಸ್ಟ್ ಇ.ಓ. ಡಿ.ವ್ಹಿ. ರಮಣರೆಡ್ಡಿ ಇತರರು ಇದ್ದರು. ವಿಭಿನ್ನ ಕ್ಷೇತ್ರಗಳ ಗಣ್ಯರನ್ನು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಾಯಚೋಟಿ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿದ ಭಕ್ತರನ್ನು ಹಾಗೂ ಸೇವಾಕರ್ತರನ್ನು ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳು ಆಶೀರ್ವದಿಸಿದರು.
ಉದ್ಯೋಗಾಭಿವೃದ್ಧಿ ಸಂಘ : ಕಲಬುರ್ಗಿಯ ಉದ್ಯಮಿ ಬಸವರಾಜ ಕಮರಡಗಿ ಕೊಡಮಾಡಿದ 1 ಲಕ್ಷ ರೂ.ಗಳ ಶಾಶ್ವತ ನಿಧಿಯೊಂದಿಗೆ ಅಸ್ತಿತ್ವಕ್ಕೆ ಬಂದ ರಾಯಚೋಟಿ ಶ್ರೀವೀರಭದ್ರೇಶ್ವರ ಉದ್ಯೋಗಾಭಿವೃದ್ಧಿ ಸಂಘವನ್ನು ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಲೋಕಾರೆ್ಣಗೊಳಿಸಿದರು. ಶ್ರೀವೀರಭದ್ರ ದೇವರ ಒಡಪುಗಳ ಪಠಣ, ಭಕ್ತಿಗೀತೆಗಳ ಪ್ರಸ್ತುತಿ, ಸಾಮೂಹಿಕ ಭಜನಾ ಕಾರ್ಯಕ್ರಮ ಶನಿವಾರ ಅಹೋರಾತ್ರಿ ಜರುಗಿದವು.