ಕಾಶ್ಮೀರದಲ್ಲಿ ಆರು ತಿಂಗಳ ಬಂಧನದ ನಂತರ ಲೋನ್, ಪರ್ರಾ ಬಿಡುಗಡೆ

 ಶ್ರೀನಗರ, ಫೆ 5 :    ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ, ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಯುಟಿ) ವಿಭಜಿಸಿದ 2019ರ ಆಗಸ್ಟ್ 5ರಿಂದ ಬಂಧನದಲ್ಲಿದ್ದ ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಗನಿ ಲೋನ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ನಾಯಕ ವಹೀದ್ ಉರ್ ರಹಮಾನ್ ಅವರನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.   

ಇದರೊಂದಿಗೆ ಉಪ ಜೈಲನ್ನಾಗಿ ಪರಿವರ್ತಿಸಲಾಗಿದ್ದ ಎಂಎಲ್‌ಎ ಹಾಸ್ಟೆಲ್‌ನಿಂದ ಎಂಟು ಮಂದಿ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಲೋನ್ ಅವರು ಬಿಜೆಪಿ ಕೋಟಾದಿಂದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.

ಮಂಗಳವಾರ ಪಿಡಿಪಿ ಶಾಸಕ ಐಜಾಜ್ ಅಹ್ಮದ್ ಮಿರ್ ಮತ್ತು ಕಾಶ್ಮಿರ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುವ ಉದ್ಯಮಿ ಶಕೀಲ್ ಅಹ್ಮದ್ ಖಲಂದರ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಮೊಹಮ್ಮದ್ ಯೂಸುಫ್ ಭಟ್, ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ (ಎನ್‌ಸಿ) ಅಬ್ದುಲ್ ಮಜೀದ್ ಲಾರ್ಮಿ, ಮೊಹಮ್ಮದ್ ಶಫಿ ಮತ್ತು ಗುಲಾಮ್ ನಬಿ ಭಟ್ ಅವರನ್ನು ಭಾನುವಾರ ಹಾಸ್ಟೆಲ್‌ನಿಂದ ಬಿಡುಗಡೆ ಮಾಡಲಾಗಿತ್ತು.

ಮಾಜಿ ಸಚಿವ ಅಬ್ದುಲ್ ಹಕ್ ಖಾನ್, ಮಾಜಿ ಕಾಂಗ್ರೆಸ್ ಶಾಸಕ ಹಾಜಿ ಅಬ್ದುಲ್ ರಶೀದ್, ಹಿರಿಯ ಎನ್‌ಸಿ ನಾಯಕ ನಜೀರ್ ಅಹ್ಮದ್ ಗುರೆಜಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಅಬ್ಬಾಸ್ ವಾನಿ ಅವರನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿತ್ತು.

ಸದ್ಯ 15 ರಾಜಕಾರಣಿಗಳು ಬಂಧನದಲ್ಲಿದ್ದಾರೆ. ಅಧಿಕಾರಿಗಳು ರಾಜಕಾರಣಿಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಬಿಡುಗಡೆಯ ಮೊದಲು ರಾಜಕಾರಣಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಬೇಕು ಎಂದು ಮೂಲಗಳು ತಿಳಿಸಿವೆ.