ಲಾಕ್ ಡೌನ್ ಉಲ್ಲಂಘನೆ: ನಟಿ ಶರ್ಮಿಳಾ ಕಾರು ಅಪಘಾತ

ಬೆಂಗಳೂರು,  ಏ.4, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ   ರಸ್ತೆಗಿಳಿದಿದ್ದ ಸ್ಯಾಂಡಲ್ ನಟಿ  ಶರ್ಮಿಳಾ ಮಾಂಡ್ರೆ ಅವರು ತೆರಳುತ್ತಿದ್ದ ಕಾರು ಶನಿವಾರ ನಸುಕಿನಲ್ಲಿ  ವಸಂತನಗರದಲ್ಲಿ ಅಪಘಾತಕ್ಕೀಡಾಗಿದೆ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಶರ್ಮಿಳಾ ಮಾಂಡ್ರೆ  ಅವರು ಜಾಲಿ ರೈಡ್ಗೆ ಹೋಗುತ್ತಿದ್ದರು ಎನ್ನಲಾಗಿದೆ. ಲಾಕ್ಡೌನ್  ಕಾರಣದಿಂದ ಅನೇಕ ಕಡೆ ವಾಹನ ಓಡಾಡಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಕೇವಲ ಅನಿವಾರ್ಯ  ಪರಿಸ್ಥಿತಿ ಇದ್ದಾಗ ಮಾತ್ರ ವಾಹನಗಳನ್ನು ಹೊರ ತರಲು ಸೂಚಿಸಲಾಗಿದೆ. ಆದರೆ, ಲಾಕ್ಡೌನ್ ನಿಯಮ ಉಲ್ಲಂಘಿಸಿ ನಟಿ  ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತ ಲೋಕೇಶ್ ಎಂಬಾತ ಶುಕ್ರವಾರ ತಡ ರಾತ್ರಿ ಜಾಲಿ  ರೈಡ್ ಮಾಡಿದ್ದರು ಎನ್ನಲಾಗಿದೆ. ಜಾಗ್ವಾರ್ ಕಾರ್ನಲ್ಲಿ ವೇಗವಾಗಿ ತೆರಳುತ್ತಿದ್ದಾಗ  ಸಿಲಿಕಾನ್ ಸಿಟಿಯ ವಸಂತನಗರ ಫ್ಲೈಓವರ್ನ ಕೆಳಗಿನ ಪಿಲ್ಲರ್ಗೆ ಡಿಕ್ಕಿ ಹೊಡೆದಿದ್ದು,  ಕಾರಿನ ಎದುರಿನ ಭಾಗ ನಜ್ಜುಗುಜ್ಜಾಗಿದೆ. ಸೀಟ್  ಬೆಲ್ಟ್ ಹಾಕದೆ ಇದ್ದಿದ್ದರಿಂದ ಕಾರ್ನ ಏರ್ಬ್ಯಾಗ್ ಓಪನ್ ಆಗಿರಲಿಲ್ಲ. ಇದರಿಂದ  ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಪೆಟ್ಟಾಗಿದೆ. ಶರ್ಮಿಳಾ ಅವರ ಸ್ನೇಹಿತನ ಕೈಗೆ  ಗಾಯವಾಗಿದೆ ಎನ್ನಲಾಗಿದೆ.
ನಟಿ  ಶರ್ಮಿಳಾ ಮಾಂಡ್ರೆ ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ. ಇಂದು ನಸುಕಿನ ಜಾವ 3  ಗಂಟೆಗೆ ಈ ಘಟನೆ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಡ್ರಿಂಕ್ ಆ್ಯಂಡ್ ಡ್ರೈವ್  ಕೇಸ್ ಎಂದು ತಿಳಿದು ಬಂದಿದೆ.ಇಂದು  ನಸುಕಿನ ಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಶರ್ಮಿಳಾ ಬಳಿ ಪೊಲೀಸ್ ಪಾಸ್ ಕೂಡ  ಇರಲಿಲ್ಲ. ಇನ್ನು ಅಪಘಾತವಾದ ನಂತರ ನಟಿ ಶರ್ಮಿಳಾ ಮಾಂಡ್ರೆ  ಜೆಪಿನಗರದಲ್ಲಿ  ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಸದ್ಯ ಇಬ್ಬರೂ ನಗರದ ಪೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.ಕಾರು  ಯಾರು ಚಾಲನೆ ಮಾಡುತ್ತಿದ್ದರು, ಇವರಿಬ್ಬರೂ ಕಾರಿನಲ್ಲೇ ಇದ್ದರೋ ಅಥವಾ ಇನ್ಯಾರು  ಕಾರಿನಲ್ಲಿ ಇದ್ದರು? ಲಾಕ್ ಡೌನ್ ಮಧ್ಯೆಯೂ ಹೊರಗಡೆ ಏಕೆ ಬರಲಾಗಿತ್ತು. ಸುಳ್ಳು ಹೇಳಿ  ಆಸ್ಪತ್ರೆಗೆ ಏಕೆ ದಾಖಲಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.