ಹೊಸದಿಲ್ಲಿ: ಕೊರೊನಾ ವೈರಸ್ ಇಂದು ವಿಶ್ವದಾದ್ಯಂತ ಹಬ್ಬಿದ್ದು ಸೋಂಕು ಹೆಚ್ಚು ಹರಡದಂತೆ ತಡೆಯುವ ಉದ್ದೇಶದಿಂದ ಇಂದು ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್‌ಡೌನ್ ಮೊರೆ ಹೋಗಿವೆ. ಭಾರತದಲ್ಲೂ ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್ ಜಾರಿಯಲ್ಲಿದೆ. ಇನ್ನು ಈ ಲಾಕ್‌ಡೌನ್ ಅವಧಿಯನ್ನು ಮುಂದಿನ 2 ತಿಂಗಳವರೆಗೆ ವಿಸ್ತರಿಸುವ ಕುರಿತಾಗಿಯೂ ಚಿಂತನೆ ನಡೆದಿದೆ.
ಭಾರತದಲ್ಲಿ ಇಂದು ಕೋವಿಡ್-19 ಸೋಂಕಿಗೆ ಸಿಲುಕಿದವರ ಸಂಖ್ಯೆ 6 ಸಾವಿರದ ಗಡಿ ದಾಟಿಯಾಗಿದೆ. ಆದ್ದರಿಂದಲೇ ಜನಸಾಮಾನ್ಯರು ರಸ್ತೆಗಳಲ್ಲಿ ಅಡ್ಡಾಡುವುದನ್ನು ತಪ್ಪಿಸಲು ಪೊಲೀಸರು ಹಗಲು ರಾತ್ರಿ ಪ್ರಯತ್ನ ನಡೆಸುತ್ತಿದ್ದಾರೆ.ಆದರೆ, ಟೀಮ್ ಇಂಡಿಯಾದ ಅವಕಾಶ ವಂಚಿತ ಆಟಗಾರ ಆಲ್‌ರೌಂಡರ್ ರಿಷಿ ಧವನ್ ಬೇಜವಾಬ್ದಾರಿತನ ಮೆರೆದು ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡುವ ಮೂಲಕ 500 ರೂ. ದಂಡ ತೆತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ರಣಜಿ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಪರ ಆಡುವ ಸ್ಟಾರ್ ಆಲ್‌ರೌಂಡರ್ ಲಾಕ್‌ಡೌನ್ ನಡುವೆ ಪ್ರತ್ಯೇಕ ಪಾಸ್ ಇಲ್ಲದೆ ಬ್ಯಾಂಕ್‌ಗೆ ತೆರಳುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದು 500 ರೂ. ದಂಡ ತೆತ್ತಿದ್ದಾರೆ. ತಮ್ಮ ಖಾಸಗಿ ಕಾರ್ ಬಳಕೆ ಮಾಡಿ ಆಚೆ ಬಂದಿದ್ದ ಧವನ್ ಸ್ಥಳದಲ್ಲೇ ದಂಡ ಪಾವತಿಸಿದ್ದಾರೆ ಎಂದು ವರದಿಯಾಗಿದೆ.