ಮಧುರೈ, ಮೇ18, ಕೊವಿಡ್-19 ಲಾಕ್‍ಡೌನ್ ಮೇ 31ರವರೆಗೆ ವಿಸ್ತರಿಸಿರುವ ಹೊರತಾಗಿಯೂ ತಮಿಳುನಾಡು ಸರ್ಕಾರ ರಾಜ್ಯದ 25 ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳಲ್ಲಿ ಜನಜೀವನ ಕ್ರಮೇಣ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಾದ ಮಧುರೈ, ಥೇಣಿ, ದಿಂಡುಗಲ್, ಶಿವಗಂಗಾ, ವಿರುಧನಗರ್, ತಿರುನಲ್ವೇಲಿ, ತೆಂಕಾಸಿ, ತೂತ್ತುಕ್ಕುಡಿ, ರಾಮನಾಥಪುರಂ ಮತ್ತು ಕನ್ಯಾಕುಮಾರಿ ಕೇಂದ್ರ ಜಿಲ್ಲೆಗಳಾದ ತಿರುಚಿನಾಪಳ್ಳಿ, ಕರೂರ್, ಪುದುಕೊಟ್ಟೈ, ತಿರುವರೂರ್, ನಾಗಪಟ್ಟಣಂ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ವಾಹನ ಸಂಚಾರ ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ಕಂಡುಬಂದಿದೆ. ಸರ್ಕಾರ ಅಗತ್ಯವಸ್ತುಗಳ ಸಾಗಾಣಿಕೆಗೆ ಅವಕಾಶ ನೀಡಿದ್ದರಿಂದ ಸೋಮವಾರ ಬೆಳಿಗ್ಗೆಯಿಂದ ಬಾಡಿಗೆ ಟ್ಯಾಕ್ಸಿ, ವ್ಯಾನ್‍ಗಳ ಸಂಚಾರ ಕಂಡುಬಂದಿದೆ. ಸರ್ಕಾರಿ ಕಚೇರಿ ಮತ್ತು ಖಾಸಗಿ ಕಾರ್ಖಾನೆಗಳಿಗೆ 20 ಪ್ರಯಾಣಿಕರ ಮಿತಿಯೊಂದಿಗೆ ವಾಹನ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ನಿರ್ಬಂಧ ಸಡಿಲಿಸಿರುವ 25 ಜಿಲ್ಲೆಗಳಲ್ಲಿ ಇ-ಪಾಸ್ ಇಲ್ಲದೆ ವಾಹನಗಳು ಸಂಚರಿಸಬಹುದಾಗಿದೆ. ಆದರೆ, ಬೇರೆ ರಾಜ್ಯಗಳಿಗೆ ತೆರಳಬೇಕಾದರೆ ಇ-ಪಾಸ್ ಅಗತ್ಯವಾಗಿರುತ್ತದೆ. ಬಹುತೇಕ ಎಲ್ಲ ಅಂಗಡಿಗಳು ಮತ್ತು ಮುಂಗಟ್ಟುಗಳು ಈ ಜಿಲ್ಲೆಗಳಲ್ಲಿ ಸೋಮವಾರ ತೆರೆದಿದ್ದವು. ಸರ್ಕಾರಿ ಕಚೇರಿಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದಕ್ಕೂ ಮುನ್ನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಚೇರಿಗಳಲ್ಲಿ ಶೇ 33ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶವಿತ್ತು.