ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ; ಏ. 20ರಿಂದ ಸೋಂಕು ಮುಕ್ತ ಪ್ರದೇಶಗಳಿಗೆ ಷರತ್ತುಬದ್ಧ ವಿನಾಯ್ತಿ; ಮೋದಿ

ನವದೆಹಲಿ/ ಬೆಂಗಳೂರು, ಏ 14, ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.ಇದರಿಂದ ದೇಶದಲ್ಲಿ ಲಾಕ್ ಡೌನ್ ಅನ್ನು 18 ದಿನಗಳ ಕಾಲ ವಿಸ್ತರಿಸಿದಂತಾಗಿದೆ. ಆದರೆ, ಲಾಕ್ ಡೌನ್ ನಿಂದ ಕಂಗೆಟ್ಟಿರುವ ಜನರಿಗೆ ಒಂದು ಸಿಹಿ ಸುದ್ದಿಯನ್ನೂ ನೀಡಿದ್ದಾರೆ. ಏ. 20ರ ನಂತರ ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ಪ್ರದೇಶಗಳಲ್ಲಿ ಷರತ್ತುಬದ್ಧ ರಿಯಾಯಿತಿ ನೀಡುವ ಘೋಷಣೆ ಮಾಡಿದ್ದಾರೆ.
ಇದಕ್ಕಾಗಿ ಎಲ್ಲಾ ರಾಜ್ಯ, ಜಿಲ್ಲೆಗಳು ಒಂದು ವಾರದ ಅಗ್ನಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಲಾಕ್ ಡೌನ್ ನಿಯಮಗಳ ಪಾಲನೆ, ಜನರ ಸಹಕಾರಗಳ ಮೇಲೆ ನಿಗಾ ವಹಿಸಲಾಗುವುದು. ಈ ಸಮಯದಲ್ಲಿ ಕೊರೋನಾ ಹಾಟ್ ಸ್ಪಾಟ್ ಗಳಲ್ಲದ ಪ್ರದೇಶಗಳಲ್ಲಿ 10 ಷರತ್ತುಗಳನ್ನೊಳಗೊಂಡ ರಿಯಾಯಿತಿ ನೀಡಲಾಗುವುದು ಎಂದಿದ್ದಾರೆ.ಆದರೆ, ಈ ಪ್ರದೇಶದಲ್ಲಿ ಒಂದೊಮ್ಮೆ ಕೊರೋನಾ ವೈರಸ್ ಪಾದ ಊರಿದರೆ ತಕ್ಷಣ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆಯಲಾಗುವುದು. ಬಡ ಜನರ ಸಂಕಷ್ಟ ಕಡಿಮೆಗೊಳಿಸಲು ಈ ನಿಯಮ ರೂಪಿಸಲಾಗಿದೆ. ಈ ಕುರಿತು ಸಂಬಂಧಿಸಿದ ರಾಜ್ಯ ಸರ್ಕಾರಗಳು ಬುಧವಾರ ವಿಸ್ತೃತ ಮಾರ್ಗಸೂಚಿ ಪ್ರಕಟಿಸಲಿವೆ ಎಂದಿದ್ದಾರೆ.ಕೊರೋನಾ ಕುರಿತು ಬೇಜವಾಬ್ದಾರಿ ಬೇಡ, ಬೇರೆಯವರಿಗೂ ಬೇಜವಾಬ್ದಾರಿತನ ತೋರಲು ಬಿಡಬೇಡಿ. ಏಪ್ರಿಲ್ 20ರಿಂದ ಸೀಮಿತ ಪ್ರದೇಶಗಳಲ್ಲಿ ಸೀಮಿತ ರಿಯಾಯಿತಿಗಳು ದೊರೆಯಲಿದೆ. ಇದನ್ನು  ಬಡವರನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ. ದಿನನಿತ್ಯದ ದುಡಿಮೆಯಿಂದ ಜೀವಿಸುವವರು  ನಮ್ಮ ದೊಡ್ಡ ಕುಟುಂಬವಾಗಿದೆ. ಅವರ ಕಡೆಗೆ ಗಮನ ನೀಡಬೇಕಿದೆ ಎಂದಿದ್ದಾರೆ. ದೇಶದಲ್ಲಿ ಕೊರೋನಾ ಹಾಟ್ ಸ್ಪಾಟ್ ಗಳನ್ನು ಗುರುತಿಸಿ ಮೊದಲಿಗಿಂತ ಹೆಚ್ಚು ನಿಗಾ ವಹಿಸಬೇಕು. ಹಾಟ್ ಸ್ಪಾಟ್ ಆಗಿ ಬದಲಾಗುವ ಲಕ್ಷಣಗಳಿರುವ ಪ್ರದೇಶಗಳ ಮೇಲೂ ನಿಗಾ ವಹಿಸಬೇಕು. ಹೊಸ ಹಾಟ್ ಸ್ಟಾಟ್ ಗಳು ನಿರ್ಮಾಣವಾದಲ್ಲಿ  ಕೊರೋನಾ ವಿರುದ್ಧದ ನಮ್ಮ ಎಲ್ಲಾ ಹೋರಾಟ ನಿಷ್ಫಲವಾಗುತ್ತದೆ ಎಂದು ಹೇಳಿದ್ದಾರೆ.