ಲಾಕ್‌‌ಡೌನ್ ವಿಸ್ತರಣೆ‌ ವದಂತಿ ನಿರಾಧಾರ: ಕೇಂದ್ರ ಸರ್ಕಾರ

ಬೆಂಗಳೂರು,‌ ಮಾ‌.30, ಸರ್ಕಾರ 21ದಿನಗಳ ಲಾಕ್ ಡೌನ್ ಮುಗಿದ ನಂತರ ಮತ್ತೆ ಲಾಕ್ ಡೌನ್ ಅನ್ನು ವಿಸ್ತರಿಸುತ್ತದೆ ಎಂಬ ವದಂತಿಗೆ  ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿಗಳು ತೆರೆ ಎಳೆದಿದ್ದಾರೆ ಪ್ರಧಾನಿ  ನರೇಂದ್ರ ಮೋದಿ ಅವರು ಕೊರೊನಾ ಸೋಂಕು ತಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇಶಾದ್ಯಂತ  21ದಿನಗಳ ಕಾಲ ಲಾಕ್‌ಡೌನ್‌ಗೆ ಕರೆ ನೀಡಿದ್ದು, ಲಾಕ್‌ಡೌನ್ ಈಗಾಗಲೇ  ಪಾಲನೆಯಾಗುತ್ತಿದ್ದು ಏಪ್ರಿಲ್ 14ಕ್ಕೆ ಇದು ಮುಗಿಯಲಿದೆ. 21ದಿನಗಳ ನಂತರವೂ ಈ  ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗಲಿದೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ  ಹರಿದಾಡುತ್ತಿದೆ. ಇದು ವದಂತಿ ಮಾತ್ರ ಮತ್ತು ಈ ಬಗೆಗಿನ ವರದಿಗಳು ನಿರಾಧಾರವಾಗಿದ್ದು ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ  ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್‌ ವಿಸ್ತರಣೆಯಾಗಲಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ಲಕ್ಷಾಂತರ ಮಂದಿ ಕಾರ್ಮಿಕರು ಮತ್ತು ಇತರ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಧಾವಂತ ಪಡುತ್ತಿದ್ದಾರೆ. ಇದರಿಂದಾಗಿ ಸಮಸ್ಯೆ ಉಲ್ಬಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ.