ಚಾಮರಾಜನಗರ, ಜೂ 12,ಲಾಕ್‍ಡೌನ್‌ನಿಂದಾಗಿ ತನ್ನ ಊರಿಗೆ ತೆರಳಲಾಗದೇ ಹತಾಶೆಗೊಂಡಿದ್ದ ಕೇರಳ ಮೂಲದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.ಕೇರಳದ ಮಲ್ಲಪ್ಪುರಂನ ನಿವಾಸಿ ಅಂಜುಂ (35) ಎಂಬುವವರು ಹೋಟೆಲ್ ನ ಕೋಣೆಯೊಂದರಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಅಂಜುಂ, ನಗರದ ಮಯೂರ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೊರೊನಾ ಲಾಕ್‍ಡೌನ್‍ನಿಂದಾಗಿ ಅವರು ಕಳೆದೆರಡು ತಿಂಗಳಿಂದ ಹೋಟೆಲ್ ನಲ್ಲೇ ತಂಗಿದ್ದರು. ಕೆಲ ದಿನಗಳಿಂದ ತನ್ನನ್ನು ಊರಿಗೆ ಕಳುಹಿಸಿಕೊಡುವಂತೆ ಮಾಲೀಕರಿಗೆ ಒತ್ತಾಯಿಸಿದ್ದನು. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇರಳಕ್ಕೆ ಬಸ್ಸು ಸಂಚಾರ ಇಲ್ಲದಿರುವುದರಿಂದ ಸದ್ಯ ಕಳುಹಿಸಿಕೊಡಲು ಆಗುವುದಿಲ್ಲ. ಬಸ್ಸು ಸಂಚಾರ ಆರಂಭವಾದ ಬಳಿಕ ಕಳುಹಿಸಿಕೊಡುವುದಾಗಿ ಹೋಟೆಲ್ ಮಾಲೀಕರು ಆತನಿಗೆ ತಿಳಿಸಿದ್ದರು ಎನ್ನಲಾಗಿದೆ.ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.