ಲಾಕ್‌ಡೌನ್‌ ಘೋಷಣೆ: ವಾಹನ ಸವಾರರಿಗೆ ಸಂಚಾರಿ ಪೊಲೀಸರಿಂದ ದಂಡ

ಹಾವೇರಿ, ಮಾ 29, ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದರೂ ಸಹ ವಾಹನಗಳಲ್ಲಿ ಜನ ಸಂಚಾರ ನಿಂತಿಲ್ಲ. ಹೀಗಾಗಿ ವಾಹನಗಳಲ್ಲಿ ಸಂಚರಿಸುವವರಿಗೆ ಸಂಚಾರಿ ಪೊಲೀಸರು ದಂಡ ವಿಧಿಸುವ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲದೇ ಇತರೆ ಜಿಲ್ಲೆಗಳಲ್ಲೂ ಸಹ ಸಂಚಾರಿ ಪೊಲೀಸರು ಅನಗತ್ಯವಾಗಿ ಸಂಚರಿಸುವವರಿಗೆ ಮೋಟಾರು ವಾಹನ ಕಾಯ್ದೆಯಡಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.ಹಾವೇರಿ ಜಿಲ್ಲೆಯಲ್ಲಿ ಪೊಲೀಸರ ಕಣ್ತಪ್ಪಿಸಿ ಅನಗತ್ಯವಾಗಿ ಕೆಲವು ವಾಹನ ಸವಾರರು ತಿರುಗುತ್ತಿದ್ದಾರೆ. ಇಂಥ ವಾಹನ ಸವಾರರ ವಿರುದ್ಧ ಎರಡು ದಿನಗಳಲ್ಲಿ 223 ಪ್ರಕರಣಗಳನ್ನು ದಾಖಲಿಸಿ, ಬರೋಬ್ಬರಿ 1,18,300 ದಂಡವನ್ನು ವಿಧಿಸಿದ್ದಾರೆ. ಲಾಕ್‌ಡೌನ್‌ ಘೋಷಣೆ ಇದ್ದರೂ ಅತ್ಯಗತ್ಯ ವಸ್ತುಗಳಾದ ತರಕಾರಿ, ದಿನಸಿ, ಹಾಲು, ಔಷಧ ಖರೀದಿಸಲು ಸಾರ್ವಜನಿಕರು ನಿಗದಿತ ವೇಳೆಯಲ್ಲಿ ಹೊರಬರಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಕೆಲವರು ಅನಗತ್ಯವಾಗಿ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ. ಇಂಥವರನ್ನು ಪೊಲೀಸರು ತಡೆದು ಲಾಠಿ ರುಚಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ದಂಡ ವಸೂಲಿ ಮಾಡುತ್ತಿದ್ದಾರೆ. ಹಾವೇರಿ ತಾಲ್ಲೂಕಿನಲ್ಲಿ 125 ಮತ್ತು ರಾಣೆಬೆನ್ನೂರು ತಾಲ್ಲೂಕಿನಲ್ಲಿ 79 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ತಾಲ್ಲೂಕುಗಳಾಗಿವೆ. ವಿಶೇಷವೆಂದರೆ, ರಟ್ಟೀಹಳ್ಳಿ ಮತ್ತು ಹಾನಗಲ್ ತಾಲ್ಲೂಕಿನಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಉಳಿದಂತೆ, ಸವಣೂರು (9), ಬ್ಯಾಡಗಿ (6), ಹಿರೇಕೆರೂರು (2), ಶಿಗ್ಗಾವಿ (2) ಪ್ರಕರಣಗಳು ದಾಖಲಾಗಿವೆ.