ಲಾಕ್‌ಡೌನ್‌, ಹೋಂ ಕ್ವಾರಂಟೈನ್‌ ಆದೇಶ ಉಲ್ಲಂಘನೆ: ರಾಜ್ಯಾದ್ಯಂತ 100ಕ್ಕೂ ಅಧಿಕ ಪ್ರಕರಣ ದಾಖಲು

ಬೆಂಗಳೂರು, ಮಾ.30,ಕೋವಿಡ್‌-19 ಸೋಂಕಿನ ಸಂದರ್ಭದಲ್ಲಿ ಜಾರಿ ಮಾಡಲಾಗಿರುವ ಲಾಕ್‌ಡೌನ್ ಹಾಗೂ ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿರುವ 100 ಕ್ಕೂ ಹೆಚ್ಚಿನ ಪ್ರಕರಣಗಳು ರಾಜ್ಯದ ಹಲವೆಡೆ ದಾಖಲಾಗಿವೆ.ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ರಾಯಚೂರು, ರಾಮನಗರ, ಚಿಕ್ಕಬಳ್ಳಾಪುರ ಸೇರಿ ಹಲವು ಕಡೆಗಳಲ್ಲಿ ಲಾಕ್‌ಡೌನ್ ಹಾಗೂ ಹೋಂ ಕ್ವಾರಂಟೈನ್ ಉಲ್ಲಂಘಿಸಿರುವ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಜಯಪುರ  ಜಿಲ್ಲೆಯ ನಾಗಠಾಣ ಗ್ರಾಮದ 5 ಮಂದಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಹಬ್ಬಿಸಿದ್ದು ಆತನನ್ನು ಪ್ರಕಾಶ್ ಚವ್ಹಾಣ ಎಂದು ಗುರುತಿಸಲಾಗಿದೆ. ಪ್ರಕಾಶ್ ಚವ್ಹಾಣ ತನ್ನ ಫೇಸ್‌ಬುಕ್‌ನಲ್ಲಿ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಜ್ ಯಾತ್ರೆಗೆ ತೆರಳಿದ್ದ 15 ಮಂದಿಯ ಪೈಕಿ ಐವರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಪೋಸ್ಟ್ ಹಾಕಿ ಜನರಲ್ಲಿ ಆತಂಕ ಸೃಷ್ಟಿಸಿದ್ದು ಆತನನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶ ಪ್ರಯಾಣ ಮಾಡಿ ಬಂದವರು ಮನೆಯಲ್ಲೇ ಇರಬೇಕೆಂದು ತಿಳಿಸಿದ್ದರೂ ಆದೇಶ ಧಿಕ್ಕರಿಸಿ ಹೊರಗೆ ಓಡಾಡುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ಶಿವಮೊಗ್ಗದಲ್ಲಿ ದೂರು ದಾಖಲಾಗಿದೆ.
ಗೋಪಾಲಗೌಡ ಬಡಾವಣೆಯ ಶೇಖರ್ ಶೆಟ್ಟಿ ಅವರ ಪುತ್ರಿ ಮತ್ತು ಮೊಮ್ಮಗಳು ಮಾ.9ರಂದು ಬಹ್ರೈನ್‌ನಿಂದ ಮತ್ತು ಅವರ ಮಗ ಮಾ.11ರಂದು ದುಬೈಯಿಂದ ಶಿವಮೊಗ್ಗಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಮನೆಯಲ್ಲೇ ಇರಲು ಸೂಚಿಸಿದ್ದರು. ಆದರೆ ಶೇಖರ್ ಶೆಟ್ಟಿ ಮನೆಯಿಂದ ಹೊರಬಂದು ಓಡಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಈಶಾನ್ಯ ರಾಜ್ಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳು ಜೆಎಲ್‌ಬಿ ರಸ್ತೆಯಲ್ಲಿರುವ ಮೆಗಾ ಸ್ಟೋರ್‌ಗೆ ಭೇಟಿ ನೀಡಿ ದಿನಸಿ ಖರೀದಿಸಲು ಮುಂದಾಗಿದ್ದರು. ಆದರೆ ಅಲ್ಲಿನ ಸಿಬಂದಿ ಒಳ ಬಿಡದೆ ಚೀನ ದೇಶದವರೆಂದು ಆರೋಪಿಸಿ ಜನಾಂಗೀಯ ತಾರತಮ್ಯ ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಖಂಡಿಸಿದ್ದಾರೆ. ನಾಗಲ್ಯಾಂಡ್‌ನ ಯೊಕೈ ಜಾನಿ ಕೊನ್ಯಾಕ್ ಮತ್ತು ಅಲಿ ಮೆರೆನ್ ಎಂಬುವರು ಜನಾಂಗೀಯ ದ್ವೇಷಕ್ಕೆ ತುತ್ತಾದವರು. ಜತೆಯಲ್ಲಿ ಆಧಾರ್ ಕಾರ್ಡ್ ತಂದರೂ ಸಿಬ್ಬಂದಿ ಒಳ ಬಿಡಲು ನಿರಾಕರಿಸಿದ್ದಾರೆ. ಘಟನೆಯನ್ನು ವೀಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಡಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.