ಗುರುನಾನಕ್ ಕೃತಿಗಳ ಲೋಕಾರ್ಪಣೆ

ನವದೆಹಲಿ, ನ 7:     ಗುರುನಾನಕ್ ಅವರ 550 ನೇ ಜನ್ಮ ವರ್ಷಾಚರಣೆ ಅಂಗವಾಗಿ ಅವರ ಸಂದೇಶಗಳನ್ನು ಜಗತ್ತಿಗೆ ಪ್ರಚುರಪಡಿಸಲು ಅನುಕೂಲವಾಗುವಂತೆ ನ್ಯಾಷನಲ್ ಬುಕ್ ಟ್ರಸ್ಟ್ (ಎನ್ ಬಿ ಟಿ) ಪ್ರಕಟ ಮಾಡಿರುವ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ನವದೆಹಲಿಯಲ್ಲಿ ಗುರುವಾರ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಪಂಜಾಬ್  ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕೇಂದ್ರ ಸಚಿವೆ ಹಸ್ರಿಮ್ರತ್ ಕೌರ್ ಬಾದಲ್, ಪಂಜಾಬ್ ನ ಅನೇಕ ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದೇ 12 ರಂದು ಗುರುನಾನಕ್ ಜಯಂತಿ ನಡೆಯಲಿದ್ದು, ಭಾರತ ಸೇರಿದಂತೆ ವಿಶ್ವಾದ್ಯಂತ ಸಾವಿರಾರು ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನದ ಕರ್ತಾರ್ಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ 9 ಶನಿವಾರದಂದು ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆಯಾಗಲಿದ್ದು ಮಾಜಿ ಪ್ರಧಾನಮಂತ್ರಿ ಡಾ.ಮನ್ ಮೋಹನ್ ಸಿಂಗ್ ಸೇರಿದಂತೆ ಸಿಖ್ ಯಾತ್ರಿಕರ ಉನ್ನತ ನಿಯೋಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.