ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಲೋಕದರ್ಶನ ವರದಿ

ರಾಯಬಾಗ 22: ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲೆಡೆಗಳಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎರಡು ತಿಂಗಳ ಹಿಂದಷ್ಟೇ ಪ್ರವಾಹದಿಂದ ತತ್ತರಿಸಿದ್ದ ತಾಲೂಕಿನ ಜನರು, ಈಗ ಮತ್ತೆ ಧಾರಾಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಸೋಮವಾರ ರಾತ್ರಿ ತಾಲೂಕುದ್ಯಾಂತ ಸುರಿದ ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗಿದೆ. ಸುಮಾರು ವರ್ಷಗಳ ನಂತರ ಪಟ್ಟಣದ ಹುಲ್ಯಾಳ ಕೆರೆ, ಅಬುತಲಾಬ(ರಾಜವಾಡೆ) ಕೆರೆ, ಸರಪಂಚ ಕೆರೆಗಳು ತುಂಬಿದ್ದು, ಈಗ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಸರಪಂಚ ಕೆರೆ ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸುಚೂನೆ ನೀಡುತ್ತಿದೆ. ಪಟ್ಟಣದ ತೆಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಂಗಡಿ, ಮನೆಗಳು ಜಲಾವೃತಗೊಂಡಿವೆ. ಪಟ್ಟಣದ ಅಂಬೇಡ್ಕರ್ ನಗರದ ಹಳ್ಳ ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಾಜವಾಡೆ ಕೆರೆ ತುಂಬಿ ಹರಿಯುತ್ತಿರುವುದರಿಂದ ಈಕ್ರಾ ಉರ್ದು  ಶಾಲೆ ಸುತ್ತ, ವಿದ್ಯಾನಗರ ರಸ್ತೆ ಮತ್ತು ರಾಯಬಾಗ-ನಾಗರಮುನ್ನೊಳ್ಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ತಾಲೂಕಿನ  ಕಂಕಣವಾಡಿ  ಪಟ್ಟಣದ ಹಿರೇಹಳ್ಳ ತುಂಬಿ ಹರಿಯುತ್ತಿರುವುದರಿಂದ ರಾಯಬಾಗ-ಗೋಕಾಕ ರಸ್ತೆ ಕೆಲ ಸಮಯ ಸಂಚಾರಕ್ಕೆ ಸ್ಥಗಿತಗೊಂಡಿತ್ತು. ರಾಯಬಾಗ ಸಕ್ಕರೆ ಕಾರ್ಖಾನೆ-ಬಾವಚಿ ರಸ್ತೆ ಮೇಲೆ ಹಳ್ಳ ತುಂಬಿ ಹರಿಯುತ್ತಿದೆ. ನಂದಿಕುರಳಿ ಗ್ರಾಮದ ಗ್ರಾ.ಪಂ.ಹತ್ತಿರದ ಬ್ರಿಜ್ ಕಂ ಬಾಂದಾರ ಮೇಲೆ ಮತ್ತು ನಂದಿಕುರಳಿ-ನಸಲಾಪೂರ ಹಳ್ಳದ ಮೇಲೆ ನೀರು ತುಂಬಿ ಹರಿಯುತ್ತಿದೆ. 

ಭಾರಿ ಮಳೆಯಿಂದ ಜಮೀನುಗಳು ಜಲಾವೃತಗೊಂಡಿವೆ. ಕಟಾವಿಗೆ ಬಂದ ಅಲ್ಪಾವಧಿ ಬೆಳೆಗಳು ನೀರಿನಲ್ಲಿ ನಿಂತಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವೇಡೆ ಬೋರವೇಲ್ಗಳಲ್ಲಿ ನೀರು ಚುಮ್ಮುತ್ತಿರುವ ವರದಿಯಾಗಿದೆ.  

ತಾಲೂಕಿನ ದಿಗ್ಗೇವಾಡಿ ಗ್ರಾಮದ ಎಸ್ಸಿ ಕಾಲಿನಿಯಲ್ಲಿನ ಮನೆಗಳಲ್ಲಿ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು, ಮಹಿಳೆಯರು ಮತ್ತು ಮಕ್ಕಳು ರಾತ್ರಿ ಇಡಿ ನೀರಿನಲ್ಲಿ ಕಳೆಯುವಂತಾಗಿದೆ. ಬಹುತೇಕ ತಾಲೂಕಾದ್ಯಾಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನರು ತತ್ತರಿಸಿ ಹೋಗಿದ್ದು, ಕೃಷ್ಣಾ ನದಿ ತೀರ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ. ಮಂಗಳವಾರ ಮಧ್ಯಾಹ್ನ 4 ಗಂಟೆಯಿಂದ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ.