ಬೆಂಗಳೂರು, ಏ.5, ಮನೆ ಕೆಲಸದವರು, ಮಡಿವಾಳರು, ಸವಿತಾ ಸಮಾಜದವರು, ನೇಕಾರರು, ಸಿದ್ಧ ಉಡುಪು ಕೈಗಾರಿಕೆಗಳಲ್ಲಿನ ಕೆಲಸಗಾರರು, ಕಟ್ಟಡ ನಿರ್ಮಾಣಗಳ ಕಾರ್ಮಿಕರು, ಟ್ಯಾಕ್ಸಿ, ಟ್ರಕ್ಕುಗಳ ಚಾಲಕರು, ಹಮಾಲರು ಮುಂತಾದ ವರ್ಗಗಳು ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಈ ವರ್ಗಳ ಸಮಸ್ಯೆಯನ್ನು ಮಾನವೀಯವಾಗಿ ಪರಿಶೀಲಿಸಿ ಕಾರ್ಮಿಕರ ಬವಣೆಯನ್ನು ಪರಿಹರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ಕೊರೋನಾ ವೈರಸ್‌ನ ಕಾರಣದಿಂದ ರಾಜ್ಯದ ಉತ್ಪಾದನಾ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಗೃಹಾಧಾರಿತ ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆಗಳು ಜೀವನ್ಮರಣದ ಸಂಕಷ್ಟವನ್ನು ಎದುರಿಸುತ್ತಿವೆ, ಇದರಿಂದಾಗಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಇದರಲ್ಲಿ ಅಸಂಘಟಿತ ವಲಯಗಳ ಕಾರ್ಮಿಕರು ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ. ದಿನದ ದುಡಿಮೆಯನ್ನು ಆಧರಿಸಿ ಬದುಕುತ್ತಿದ್ದ ಇವರ ರಕ್ಷಣೆಗೆ ಸರ್ಕಾರ ತುರ್ತಾಗಿ ಧಾವಿಸಬೇಕಾಗಿದೆ ಎಂದು ಒತ್ತಯಿಸಿದ್ದಾರೆ.
ರೈತ, ಕೂಲಿ-ಕಾರ್ಮಿಕರಿಲ್ಲದೆ ಆರ್ಥಿಕತೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ವಲಯಗಳು ಕಷ್ಟದಲ್ಲಿರುವಾಗ ಅವರ ನೆರವಿಗೆ ನಾಗರಿಕವೆನ್ನಿಸಿಕೊಂಡ ಸರ್ಕಾರಗಳು ಧಾವಿಸಬೇಕು. ಇವರಲ್ಲಿ ಮನೆ ಕೆಲಸದವರು, ಮಡಿವಾಳರು, ಸವಿತಾ ಸಮಾಜದವರು, ನೇಕಾರರು, ಸಿದ್ಧ ಉಡುಪು ಕೈಗಾರಿಕೆಗಳಲ್ಲಿನ ಕೆಲಸಗಾರರು, ಕಟ್ಟಡ ನಿರ್ಮಾಣಗಳ ಕಾರ್ಮಿಕರು, ಟ್ಯಾಕ್ಸಿ, ಟ್ರಕ್ಕುಗಳ ಚಾಲಕರು, ಹಮಾಲರುಗಳು, ಸಿನಿಮಾ ರಂಗದ ಹಾಗೂ ಕಿರುತೆರೆ ಕ್ಷೇತ್ರದ ಕಾರ್ಮಿಕರು, ಮೀನುಗಾರರು ಮುಂತಾವರಿದ್ದಾರೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಮಂದಿ ನನಗೆ ದೂರವಾಣಿ ಕರೆ ಮಾಡಿ ತಮಗೆ ಒದಗಿ ಬಂದಿರುವ ಸಂಕಷ್ಟ ವಿವರಿಸುತ್ತಿದ್ದಾರೆ. ಇವರಿಗೆ ವಿಶೇಷ ಪ್ಯಾಕೇಜ್‌ನ್ನು ನೀಡಬೇಕು. ಅಲ್ಲದೆ ಸಂಬಂಧಿಸಿದ ಕಾರ್ಮಿಕರ ಮಾಲೀಕರು ಲಾಕ್ ಡೌನ್ ಅವಧಿಯ ಸಂಬಳವನ್ನು ನೀಡುವಂತೆ ಮನವೊಲಿಸಬೇಕು. ಈ ವಿಷಯದಲ್ಲಿ ಕೇಂದ್ರ ರಾಜ್ಯಗಳೆರಡೂ ಹೆಚ್ಚು ಪ್ರಾಯೋಗಿಕವಾಗಿ ವೈಜ್ಞಾನಿಕವಾಗಿ ಪ್ರಬುದ್ಧತೆಯಿಂದ ನಡೆಸುಕೊಳ್ಳಬೇಕು,.ಈ ಸಮಸ್ಯೆ ಮಾನವೀಯವಾಗಿ ಪರಿಶೀಲಿಸಿ ಕಾರ್ಮಿಕರ ಬವಣೆಯನ್ನು ಪರಿಹರಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.