ಮನ ಪರಿವರ್ತನೆ ಆಗಲಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ 01 :ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸುಗಮ ಸಂಗೀತಗಳು, ನಾಟಕಗಳು ಖೈದಿಗಳ ಮನ ಪರಿವರ್ತನೆ ಮಾಡಲು ಸಹಾಯ ಮಾಡುತ್ತವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಕೇಂದ್ರ ಕಾರಗೃಹ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕೇಂದ್ರ ಕಾರಗೃಹ ಆವರಣದಲ್ಲಿ ಶನಿವಾರ ಏರಿ್ಡಸಿದ್ದ ಮನಃ ಪರಿವರ್ತನಾ ಮನರಂಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜವನ್ನು ನಿರಂತರ ತಿದ್ದುವ ಕಾರ್ಯ ನಾಟಕಗಳು, ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮಗಳು ಮಾಡುತ್ತಿವೆ. ಇದರಿಂದ ಮನುಷ್ಯನಲ್ಲಿ ಹೊಸ ಚೈತನ್ಯ ಮೂಡಿ ಮನಸ್ಸು ಪರಿವರ್ತನೆ ಆಗುತ್ತದೆ. ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.ಕೇಂದ್ರ ಕಾರಗೃಹದ ಸಹಾಯಕ ಅಧೀಕ್ಷಕಿ ಉಮ್ಮಿ ತಸ್ಮಿಯಾ.ಜಿ ಅವರು ಮಾತನಾಡಿ, ಬಂಧಿಗಳಿಗಾಗಿ ಇಂತಹ ಕಾರ್ಯಕ್ರಮಗಳು ಮನಪರಿವರ್ತನೆ ಜೊತೆಗೆ ಮನರಂಜನೆ ನೀಡುತ್ತದೆ. ಖೈದಿಗಳು ಸಹ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಂಡು ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬಹುದು ಎಂದರು.ಕಾರ್ಯಕ್ರಮದಲ್ಲಿ ಶಂಕರಬಂಡೆಯ ಯಲ್ಲನಗೌಡ ತಂಡದಿಂದ ನಾಟಕ ಪ್ರದರ್ಶನ ಮತ್ತು ಸುಗಮ ಸಂಗೀತ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಪೋಲಿಸ್ ಇಲಾಖೆ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು, ಖೈದಿಗಳು ಉಪಸ್ಥಿತರಿದ್ದರು.