ಬೆಂಗಳೂರು, ನೆರೆಯಿಂದ ರಸ್ತೆಗೆ ಬಿದ್ದಿರುವ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಅವರು ಈಗಾಗಲೇ ಹೇಳಿರುವಂತೆ ಮನೆ ಬಾಡಿಗೆಗೆ 5 ಸಾವಿರ ರೂ, ಮನೆ ಕಟ್ಟಲು 5 ಲಕ್ಷ ನೀಡಲಿ. ಆದಷ್ಟು ಬೇಗ ಆ ಜನರ ನೋವಿಗೆ ಸ್ಪಂದಿಸಲಿ' ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸದಾಶಿವನಗರದ ತಮ್ಮನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಮ್ಮ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾವು ಶಿವಳ್ಳಿ ಕ್ಷೇತ್ರ ಕುಂದಗೋಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡುವ ಕಾರ್ಯ ನಡೆದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಗೆ ತೆರಳಿದಾಗ ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ಥರಿಗೆ ಒಂದೇ ಒಂದು ರೂಪಾಯಿ ಸಹ ಪರಿಹಾರ ವಿತರಣೆ ಮಾಡಿಲ್ಲ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವ ಮುನ್ನವೇ ರೈತರ ಸಾಲಮನ್ನಾ ಮಾಡಿಲ್ಲ ಎಂದು ಯಡಿಯೂರಪ್ಪ ಧ್ವನಿ ಎತ್ತಿದ್ದರು. ಸಾಲಮನ್ನಾ ಆ ಮೇಲೆ ಇರಲಿ, ಸದ್ಯಕ್ಕೆ ಬೀದಿಗೆ ಬಿದ್ದಿರುವ ಪ್ರವಾಹ ಸಂತ್ರಸ್ತರಿಗೆ ತಾವು ಕೊಟ್ಟ ಮಾತಿನಂತೆ ಪರಿಹಾರ ನೀಡಲಿ. ಈ ವಿಚಾರವಾಗಿ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಘೋಷಣೆ ಮಾಡಿರುವಂತೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕ ಸ್ಥಾನಗಳ ಆಯ್ಕೆ ನಡೆದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಹಣೆ ಬರಹದಲ್ಲಿ ಬರೆದಿದ್ದರೆ ಎಲ್ಲವೂ ಹುಡಿಕಿಕೊಂಡು ಬಂದೆ ಬರುತ್ತದೆ. ಅದರ ಮೇಲೆ ನನಗೆ ನಂಬಿಕೆ ಇದೆ. ಈಗ ಸವದಿ ಅವರನ್ನೇ ತೆಗೆದುಕೊಳ್ಳಿ, ನಾನು ಅವರಿಗೆ ಅಭಿನಂದಿಸುತ್ತೇನೆ. ಅವರು ಚುನಾವಣೆ ಗೆಲ್ಲದಿದ್ದರೂ ಅವರ ಹಣೆಯಲ್ಲಿ ಬರಿದಿತ್ತು ಸಚಿವರೂ ಆದರೂ ಉಪಮುಖ್ಯಮಂತ್ರಿನೂ ಆಗಿದ್ದಾರೆ. ಹಾಗೇ ನಮ್ಮ ಹಣೆಯಲ್ಲಿ ಬರೆದಿದ್ದರೆ ನಾವು ಉನ್ನತ ಹುದ್ದೆ ಅಲಂಕರಿಸುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್ ಬೇರೆಯವರ ಹೇಳಿಕೆಗಳಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ನಾನು ಯಾವ ಸ್ಥಾನದ ಆಕಾಂಕ್ಷಿಯೂ ಅಲ್ಲ. ನೀವು ಹೇಳುವಂತೆ ನಾನು ಎಲ್ಲಿಗೂ ಲಾಬಿ ಮಾಡಲು ಹೋಗಿಲ್ಲ. ಅದೆಲ್ಲ ಕಾಡಿಬೇಡಿ ಪಡೆಯುವಂತದ್ದೂ ಅಲ್ಲ. ನಾನೇಕೆ ಲಾಭಿ ಮಾಡಲಿ? ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಡಿಕೆ ಶಿವಕುಮಾರ್ ಯಾರು ಏನು ಎಂದು ಜನರಿಗೆ ಪರಿಚಯ ಇದೆ. ನನಗೆ ಲಾಬಿ ಮಾಡುವ, ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ನನ್ನ ಪಕ್ಷ ಹಾಗೂ ಗಾಂಧಿ ಕುಟುಂಬ. ಅವರ ನಾಯಕತ್ವದ ಮೇಲೆ ನಂಬಿಕೆ ಇದೆ. ಅವರು ಏನೇ ಕೊಟ್ಟರು ಅದನ್ನು ಪ್ರಸಾದ ಅಂತಾ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.
ನಮ್ಮ ಪಕ್ಷದಲ್ಲಿ ಈಗಾಗಲೇ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರು ಬರುತ್ತಾರೆ. ಅವರೇ ಯಾವ ತೀರ್ಮಾನ ಮಾಡಬೇಕೋ ಎನ್ನುವುದನ್ನು ನಿರ್ಧರಿಸಿ ಮಾಡುತ್ತಾರೆ. ತಮಗಂತೂ ವುದೇ ಆತುರ ಇಲ್ಲ. ನನಗೆ ಅದರ ಅಗತ್ಯವೂ ಇಲ್ಲ. ನಾವು ಕಾರ್ಯಕರ್ತರು ಹೀಗಾಗಿ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಹೇಗೆ ಮರ್ಯಾದೆ ಕೊಡಬೇಕೋ ಹಾಗೆಯೇ ಕೊಡುತ್ತೇವೆ. ಪಕ್ಷದ ಸಂಘಟನೆ ವಿಚಾರವನ್ನು ದಿನೇಶ್ ಗುಂಡುರಾವ್ ಹಾಗೂ ಹೈಕಮಾಂಡ್ ಅನ್ನು ಕೇಳಿ ಎಂದರು.
ಇಂದಿರಾ ಕ್ಯಾಂಟೀನ್ ಅನುದಾನ ಕಡಿತದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಈ ಹಿಂದೆ ಯಾವ ಕಾರ್ಯಕ್ರಮಗಳನ್ನು ಮಂಜೂರು ಮಾಡಿತ್ತೋ ಅದನ್ನು ರದ್ದುಗೊಳಿಸಲು ನಾವು ಬಿಡುವುದಿಲ್ಲ. ಕುಮಾರಸ್ವಾಮಿ ಸರ್ಕಾರ ಇರಲಿ ಅಥವಾ ಸಿದ್ದರಾಮಯ್ಯ ಅವರ ಸರ್ಕಾರ ಇರಲಿ ನಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಲು ಹೋದರೆ, ಕೇವಲ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ನ 34 ಶಾಸಕರೂ ಸೇರಿದಂತೆ ಒಟ್ಟು ನೂರು ಶಾಸಕರ ಒಟ್ಟಾಗಿ ಹೋರಾಟ ಮಾಡುತ್ತೇನೆ. ನಮ್ಮ ಮೈತ್ರಿ ಮುಂದುವರಿಯುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ ಒಟ್ಟಾಗಿ ಸರ್ಕಾರ ಮಾಡಿದಾಗ ಮಾಡಿದ ಕಾರ್ಯಕ್ರಮವನ್ನು ನಿಲ್ಲಿಸಲು ಈ ಸರ್ಕಾರ ಮುಂದಾದರೆ ಅದರ ವಿರೋಧ ಹೋರಾಟ ಮಾಡುತ್ತೇವೆ ಎಂದರು.
ನಮ್ಮ ಬಾಂಬೆ ಸ್ನೇಹಿತರು ಯಾವಾಗ ಮಂತ್ರಿ ಆಗುತ್ತಾರೆ ಎಂದು ನೋಡಲು ಕಾತುರನಾಗಿದ್ದೇನೆ. 17 ಖಾತೆಗಳು ಅವರಿಗಾಗಿ ಕಾಯ್ದುಕೊಂಡಿವೆ. ಹೀಗಾಗಿ ಅವರು ಮಂತ್ರಿಯಾಗುವುದನ್ನು ಮಾಧ್ಯಮಗಳಲ್ಲಿ ನೋಡಲು ಕಾಯುತ್ತಿದ್ದೇನೆ. ಅವರು ಯಾಕೆ ಕಣ್ಣೀರಿಡಬೇಕು?. ಪಾಪ ಅವರೂ ಕೂಡ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಪಕ್ಷದಿಂದ ಗೆದ್ದಿದ್ದಾರೆ. ಅವರು ಅದನ್ನು ಎತ್ತಿಕೊಂಡು ಹೋಗಿ ಬಿಜೆಪಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಹೋರಾಟ ಮಾಡಿ ಯಡಿಯೂರಪ್ಪನವರಿಗೆ ಕಂಕಣ ಕಟ್ಟಿ ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ ಅದರ ಫಲ ಅನುಭವಿಸುತ್ತಿದ್ದಾರೆ. ಮೊದಲು ಒಂದು ಕಾಲ ಇತ್ತು. ಅಲ್ಲಿ ತಂದೆ ತಾಯಿ ಮಾಡಿದ ಫಲವನ್ನು ಮಕ್ಕಳು ಮೊಮ್ಮಕ್ಕಳು ಅನುಭವಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ನಾವು ಮಾಡಿದನ್ನು ನಾವೇ ಅನುಭವಿಸಬೇಕು. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಟೀಕಿಸಿದರು.