ವಿಶ್ವನಾಥ್ ಇನ್ನೂ ಮೂರ್ನಾಲ್ಕು ಪುಸ್ತಕಗಳನ್ನು ಬರೆಯಲಿ: ಹೆಚ್.ಕೆ.ಕುಮಾರಸ್ವಾಮಿ ವ್ಯಂಗ್ಯ

ಬೆಂಗಳೂರು,ಫೆ‌4: ರಾಜಕೀಯವಾಗಿ ಹಿನ್ನೆಡೆಯಾದಾಗಲೆಲ್ಲಾ ಮಾಜಿ ಸಚಿವ ಹೆಚ್‌.ವಿಶ್ವನಾಥ್‌  ಅವರಿಗೆ ಹೀಗೆ ಪುಸ್ತಕ ಬರೆಯುವ ಮನಸಾಗುತ್ತದೆ. ರಾಜಕೀಯವಾಗಿ ತೀವ್ರ ಸಂಕಷ್ಟದಲ್ಲಿರುವ ಅವರು ಇನ್ನೂ ಮೂರ್ನಾಲ್ಕು ಪುಸ್ತಕಗಳನ್ನು ಬೇಕಾದರೆ ಬರೆಯಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ವಿಚಾರವಾಗಿ ಹೆಚ್.ವಿಶ್ವನಾಥ್ ಪುಸ್ತಕ ಬರೆಯುತ್ತೇನೆ‌ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲಿ ಆಡಳಿತ ಪಕ್ಷದ ಧೊರಣೆ ನೋಡಿದರೆ ವಲಸಿಗರು ಮತ್ತು ಮೂಲ ಬಿಜೆಪಿ ನಾಯಕರ ನಡುವೆ ಯುದ್ಧ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವನಾಥ್ ಗೆ ಪುಸ್ತಕ ಬರೆಯುವ ಮನಸ್ಸಾಗುತ್ತದೆ. ಒಂದಲ್ಲಾ ಎರಡು ಪುಸ್ತಕಗಳನ್ನು ಬರೆಯಲಿ ಎಂದು ಲೇವಡಿ ಮಾಡಿದರು.

ಮಹಾತ್ಮಾಗಾಂಧೀಜಿ ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿದ  ಪ್ರಚೋದನಾತ್ಮಕ ಹೇಳಿಕೆಯನ್ನು ಖಂಡಿಸಿದ ಕುಮಾರ ಸ್ವಾಮಿ, ಅನಂತ ಕುಮಾರ್ ಹೆಗಡೆ ಮಾತು ಮತ್ತು ಅಂತಹ ಮನಸ್ಥಿತಿಯವರಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಸಂಸತ್ತಿನಿಂದ ಅನಂತ ಕುಮಾರ್ ಹೆಗಡೆ ಅವರನ್ನು ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ - ಸಿ ಎ ಎ, ಎನ್ ಆರ್ ಸಿ ವಿರುದ್ಧ ಹೋರಾಟ ಮಾಡುವುದು ಜನಸಾಮಾನ್ಯರ ಅಧಿಕಾರವಾಗಿದ್ದು, ದೆಹಲಿಯಲ್ಲಿ ಗುಂಡು ಹಾರಿಸಿದ ಯುವಕನ ಕೃತ್ಯ ಖಂಡನೀಯ. ಇದರ ಹಿಂದೆ ಸರ್ಕಾರ ಇದೆ ಎಂಬ ಗುಮಾನಿ ಮೂಡುತ್ತಿದೆ. ಹಿಂಸಾತ್ಮಕ ಪ್ರವೃತ್ತಿಗೆ ಬಿಜೆಪಿ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದರು.

ಬಜೆಟ್ ವಿಚಾರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರ ಸಲಹೆ ಸೂಚನೆಗಳನ್ನು ಪಡೆಯುವಂತೆ ಕೊರಲಾಗಿತ್ತು. ಆದರೆ ಬಿಜೆಪಿಗೆ ಜನಪರ ಕಾಳಜಿ ಇಲ್ಲ. ಈ ಬಾರಿ ಮಂಡಿಸಿರುವ ಕೇಂದ್ರ ಬಜೆಟ್ ಸಹ ಜನ ಪರವಾಗಿಲ್ಲ. ಬಿ ಎಸ್ ಎನ್ ಎಲ್ ಮುಚ್ಚುತ್ತಿದ್ದಾರೆ.   ಜೀವ ವಿಮಾ ನಿಗಮ - ಎಲ್ ಐಸಿ ಷೇರುಗಳನ್ನು ಪರಭಾರೆ ಮಾಡಲಾಗುತ್ತಿದೆ. ಉದ್ಯೋಗ ಕಡಿತಗೊಂಡಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವನ್ನೂ ಖಾಸಗೀಕರಣಕ್ಕೆ ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಮತ್ತು ಡಿಸೇಲ್ ಬೆ ಲೆ ಏರಿಕೆ ಆಗಿದೆ. ಕಾಫಿ ಬೆಲೆ ಕುಸಿತಗೊಂಡಿದ್ದು, ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ಹಾನೀಗೀಡಾಡುತ್ತಿದೆ. ಆದರೆ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಈ ವಿಚಾರಗಳ ಬಗ್ಗೆ ಗಮನ ಹರಿಸಿಲ್ಲ ಎಂದರು.

ಫೆ. 10-11ರಂದು ರಾಷ್ಟ್ರೀಯ ಕಾರ್ಯಕಾರಣಿ ನಡೆಯಲಿದ್ದು, ಇದರಲ್ಲಿ ರಾಷ್ಟ್ರ, ರಾಜ್ಯದ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಫೆ.,10

ಬೆಳಿಗ್ಗೆ 11ಗಂಟೆಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಇದೆ. ಅದೇ ದಿನ ರಾತ್ರಿ ಜೆಪಿ ಭವನದಲ್ಲಿ ರಾಷ್ಟ್ರೀಯ ಕಾರ್ಯಕಾರಣಿ‌ ನಡೆಯಲಿದೆ. 11ರಂದು ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮುಂದುವರಿಯಲಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನ್ನ ಹೊಸ ಬಜೆಟ್ ನಲ್ಲಿ ಏನೇನು ಕೊಡುಗೆ ನೀಡುತ್ತಾರೋ ನೋಡಬೇಕಿದೆ. ಈ ಸರ್ಕಾರ ಇಡೀ ವರ್ಷ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿತ್ತು. ಹಿಂದೆ ಏಪ್ರಿಲ್ ಮೇ ತಿಂಗಳಲ್ಲಿ ಮಾತ್ರ ವರ್ಗಾವಣೆ ನಡೆಯುತ್ತಿತ್ತು .ಸರ್ಕಾರ ವರ್ಗಾವಣೆ ನೀತಿ ಜಾರಿಗೆ ತರಬೇಕು ಹೆಚ್ ಕೆ ಕುಮಾರಸ್ವಾಮಿ ಒತ್ತಾಯಿಸಿದರು.