ನೆರೆ ಪರಿಹಾರದಲ್ಲಿ ಕಾಂಗ್ರೆಸ್ ನಾಯಕರು ತೊಡಗಿಸಿಕೊಳ್ಳಲಿ: ಶಾಸಕ ಕೆಎಸ್ ಈಶ್ವರಪ್ಪ

ಶಿವಮೊಗ್ಗ  12: ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿಲ್ಲವೇ, ಎಚ್ ಡಿ ಕುಮಾರಸ್ವಾಮಿಗೆ ವಯಸ್ಸಾಗಿಲ್ಲವೇ, ನೆರೆ ಪ್ರದೇಶಕ್ಕೆ ಅವರು ಭೇಟಿ ನೀಡುವುದನ್ನು ಸ್ವಾಗತಿಸುತ್ತೇನೆ ಆದರೆ ವಯಸ್ಸಾಗಿದೆ ಎಂದು ಕೀಳು ಮಟ್ಟದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಆರೋಪಿಸಿದ್ದಾರೆ 

   ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.  ರಾಜಕಾರಣ ಅವರು ಮಾಡಿದರೆ ನಮಗೂ ರಾಜಕಾರಣ ಮಾಡುವುದಕ್ಕೆ ಬರುತ್ತದೆ. ಆದರೆ, ಇದು ರಾಜಕಾರಣ ಮಾಡುವ ಸಮಯವಲ್ಲ, ರಾಜ್ಯದ ಜನ ನೆರೆ, ಅತಿವೃಷ್ಠಿಯಿಂದ ಪರಿತಪಿಸುತ್ತಿದ್ದಾರೆ ಎಲ್ಲಾ ಪಕ್ಷದವರು ಒಟ್ಟಾಗಿ ಪರಿಹಾರ ಹುಡುಕುದು ಸೂಕ್ತ ಎಂದು ಅವರು ಹೇಳಿದರು. ಪ್ರವಾಹ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕಿತ್ತು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಮೊದಲು ವಿರೋಧ ಪಕ್ಷದ ನಾಯಕರಾಗಲಿ, ಅಂತೆಯೇ ಬಾದಾಮಿ ಕ್ಷೇತ್ರದ ಶಾಸಕರು ಮೊದಲು ಅವರ ಕ್ಷೇತ್ರಕ್ಕೆ ಭೇಟಿ ನೀಡಲಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಗಿದ್ದಾಗ ಬರ ಪೀಡಿತಕ್ಕೆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೇ?, ಎಐಸಿಸಿ ಸಭೆಗಾಗಿ ದೆಹಲಿಗೆ ತೆರಳುತ್ತಾರೆ. ಆದರೆ ಅವರ ಕ್ಷೇತ್ರಕ್ಕೆ ಅವರು ಹೋಗಿಲ್ಲ, ಇದು ರಾಜಕಾರಣ ಮಾಡುವ ಸಂದರ್ಭವಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಳೆದರು. 

  ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಾಮಿಗೆ ಹಾಗೆ ರಾಜ್ಯ ಪ್ರವಾಸ ಮಾಡಲಿ, ವಿರೋಧ ಪಕ್ಷದ ನಾಯಕರಾಗಲು ಹೊರಟ್ಟಿದ್ದೀರಿ, ಅದಕ್ಕೆ ನಮ್ಮದ್ದೇನು ಅಭ್ಯಂತರವಿಲ್ಲ, ನಿಮ್ಮ ಪಕ್ಷದ ಮಾಜಿ ಸಚಿವರಾದ ಹೆಚ್.ಕೆ ಪಾಟೀಲರು ಸ್ವಲ್ಪ ಪ್ರವಾಹ ಪೀಡಿತ ಪ್ರದೇಶಕ್ಕೆ ಬೇಟಿ ನೀಡುತ್ತಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಪರಿಹಾರ ಕಾರ್ಯಗಳಲ್ಲಿ ತೊಗಿರುವವರನ್ನು ಹುಡುಕಬೇಕಿದೆ ಎಂದು ಅವರು ಲೇವಡಿ ಮಾಡಿದರು.