ಲೋಕದರ್ಶನ ವರದಿ
ಕಂಡಕ್ಟರ್ ಮೇಲಿನ ಪೋಸ ಪ್ರಕರಣವನ್ನು ಹಿಂಪಡೆಯಲು ಲೆಂಕೆನ್ನವರ ಆಗ್ರಹ
ಮೂಡಲಗಿ 27: ಕರ್ನಾಟಕದ ಅವಿಭಾಜ್ಯ ಅಂಗ ಎರಡನೇ ರಾಜಧಾನಿ ಎಂದು ಹೆಸರಾಗಿರುವಂತಹ ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಕೆಲವು ಮರಾಠಿ ಸಂಘಟನೆಗಳು ಮತ್ತು ಪುಂಡರು ಕನ್ನಡದ ಮೇಲೆ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ. ಭಾಷಾವಾರು ಪ್ರಾಂತ್ಯ ವಿಭಜನೆಯಾಗಿ ದಶಕಗಳೆ ಕಳೆದರು ಬೆಳಗಾವಿ ಕನ್ನಡಿಗರ ಆಸ್ತಿ ಎಂಬುದನ್ನು ಮಹಾಜನ ವರದಿ ಸಾಕ್ಷಿಗೊಳಿಸುತ್ತಿದ್ದರು, ಬೆಳಗಾವಿಯಲ್ಲಿ ಈ ಮರಾಠಿ ಭಾಷಾ ಭಯೋತ್ಪಾದಕರ ಉಪಟಳ ನಿಲ್ಲುತ್ತಿಲ್ಲ. ಮೊನ್ನೆಯ ದಿನ ಮರಾಠಿಯಲ್ಲಿ ಮಾತನಾಡದ್ದಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ (ಕಂಡಕ್ಟರ್ ಮತ್ತು ಡ್ರೈವರ) ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಲ್ಲದೆ ಅಮಾಯಕ ಕಂಡಕ್ಟರ್ ಮಹಾದೇವಪ್ಪ ಅವರ ಮೇಲೆ ಪೋಸ್ಕೋ ಪ್ರಕರಣ ದಾಖಲಿಸಿರುವುದು ಒಂದು ಷಡ್ಯಂತ್ರವಾಗಿದೆ. ಈ ಕೂಡಲೆ ದುರುದ್ದೇಶಪೂರಿತ ಪೋಸ್ಕೋ ಪ್ರಕರಣವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ತಾಲೂಕಾಧ್ಯಕ್ಷ ಸಚೀನ ಲೆಂಕೆನ್ನವರ ಆಗ್ರಹಿಸಿದರು.
ಮಂಗಳವಾರ ನಗರದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಮಹದೇವಪ್ಪ ಅವರ ಮೇಲೆ ದಾಖಲಿಸಿರುವ ಪ್ರಕರಣ ಮರಾಠಿ ಪುಂಡರ ರಕ್ಷಣೆಗೆ ನಡೆದಿರುವ ಯತ್ನವಾಗಿದ್ದು ಪೋಲಿಸ ಇಲಾಖೆ ಇದಕ್ಕೆ ಅವಕಾಶ ಕೊಡದೆ ತಪಿತಸ್ಥ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಗಡಿಭಾಗಗಳಲ್ಲಿ ಕರ್ನಾಟಕ ಸರ್ಕಾರದ ಬಸ್ಸುಗಳಿಗೆ ಮಸಿ ಬಳಿಯುತ್ತಿರುವ ಮತ್ತು ಚಾಲಕರಿಗೆ ಬಲವಂತವಾಗಿ ಜೈ ಮಹಾರಾಷ್ಟ್ರ ಘೋಷಣೆ ಕೂಗಲು ಒತ್ತಾಯಿಸುತ್ತಿರುವ ಘಟನೆಗಳು ಮತ್ತು ಬೆಳಗಾವಿಯಲ್ಲಿ ನಿನ್ನೆ ದಿನ ಕನ್ನಡಪರ ಸಂಘಟಕರ ಮೇಲೆ ಆಗಿರುವ ಹಲ್ಲೆೆ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸುತ್ತಿದೆ ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿರುವ ಸಂದರ್ಭದಲ್ಲೆ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಮತ್ತು ಡ್ರೈವರ ಹಲ್ಲೆಗೆ ಒಳಗಾದ ಬಾಳೇಕುಂದ್ರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೇ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದು ಆ ಕಾರ್ಯಕ್ರಮ ಸಂಪೂರ್ಣ ಮರಾಠಿ ನಾಮಫಲಕದಿಂದ ಕೂಡಿತ್ತು. ಇದು ಸಚಿವರ ಮರಾಠಿ ಒಲೈಕೆಗೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿಯವರಗೂ ಹಲ್ಲೆಗೆ ಒಳಗಾದ ಕನ್ನಡಿಗರನ್ನು ನೋಡಲು ಭಾರದ ಸಚಿವರ ನಡೆ ಇಡೀ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ.
ಕನ್ನಡಪರ ಸಂಘಟನೆಯ ಶಿವರೆಡ್ಡಿ ಹುಚರೆಡ್ಡಿ ಮಾತನಾಡಿ ಈ ಪ್ರಕರಣವನ್ನು ಸರ್ಕಾರ ಮತ್ತು ಗಡಿ ಸಂರಕ್ಷಣಾ ಆಯೋಗ ಗಂಭಿರವಾಗಿ ಪರಿಗಣಿಸಿ ತಪಿತಸ್ಥರ ವಿರುದ್ಧ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಿಸಿ ಶೀಘ್ರವೆ ಕ್ರಮ ಕೈಗೊಳ್ಳಬೇಕು ಮತ್ತು ಮಹಾರಾಷ್ಟ್ರ ಗಡಿಭಾಗಗಳಲ್ಲಿ ಕರ್ನಾಟಕ ಸರ್ಕಾರದ ಬಸ್ಸು ಮತ್ತು ಚಾಲಕರ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಕರ್ನಾಟಕಕ್ಕೆ ಸಂಚರಿಸುವ ಎಲ್ಲ ವಾಹನಗಳ ಮೇಲೆ ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಜರಗುವ ಎಲ್ಲ ಹಾನಿಗೆ ಸರ್ಕಾರ ಮತ್ತು ಜಿಲ್ಲಾಡಳಿತವೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.