ಬೆಂಗಳೂರು, ಜು 28 ಆತುರಾತುರವಾಗಿ ತೀಪು ಪ್ರಕಟಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಅನರ್ಹಶಾಸಕರು ಸುಪ್ರಿಂಕೋರ್ಟ್ ಮೆಟ್ಟಿಲೇರುತ್ತಿರುವುದಾಗಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ಸರ್ಕಾರಿ ದಿನ. ಸರ್ಕಾರಿ ದಿನವನ್ನೂ ಲೆಕ್ಕಿಸದೇ ಸ್ಪೀಕರ್ ನಮ್ಮೆಲ್ಲರ ಸದಸ್ಯತ್ವ ಅನರ್ಹಗೊಳಿಸಿ ಆದೇಶಿಸಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಮೇಶ್ ಕುಮಾರ್ ಅವಸರದಲ್ಲಿ ತಪ್ಪು ತೀರ್ಮಾನ ತೆಗೆದುಕೊಂಡಿದ್ದಾರೆ. ಅವರು ಕೇವಲ ಅನರ್ಹತೆ ಬಗ್ಗೆ ಮಾತ್ರ ಮಾತನಾಡಿದ್ದಾರೆಯೇ ಹೊರತು ರಾಜೀನಾಮೆ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಬಹಳ ಆತುರಾತುರವಾಗಿ ಅವರು ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ. ಅವರಿಗೆ ಇಂತಹ ತುರ್ತು ನಿರ್ಧಾರದ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.
ಯಾವಯಾವ ಸಂದರ್ಭದಲ್ಲಿ ಏನಾಯಿತು, ಮೈತ್ರಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಎನ್ನುವುದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ ನಮ್ಮ ರಾಜೀನಾಮೆ ವಿಚಾರವನ್ನು ಸ್ಪೀಕರ್ ಗಮನಿಸಿಲ್ಲ. ಅವರು ಕೇವಲ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ದೂರನ್ನು ಮಾತ್ರ ಪರಿಗಣಿಸಿದ್ದಾರೆ ಹೊರತು ದೂರುದಾರರ ಮನವಿಯನ್ನು ಪರಿಗಣಿಸಿಲ್ಲ. ತಮಗೂ ಕಾನೂನಿನ ಬಗ್ಗೆ ಅರಿವಿದೆ. ಹೀಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಗೆಲ್ಲುವುದಾಗಿ ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಜನರಲ್ಲಿ ಕ್ಷಮೆಯಾಚಿಸುತ್ತೇವೆ. ನಾವು ಹಣ ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಹೇಸಿಗೆ ಸರ್ಕಾರದ ದುರಾಡಳಿತದ ವಿರುದ್ಧ ರಾಜೀನಾಮೆ ನೀಡಿದ್ದೇವೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಮೂವರು ಸಚಿವರು ರಾಜೀನಾಮೆ ನೀಡಿರುವುದು ಹುಡುಗಾಟದ ವಿಷಯವಲ್ಲ. ಜಿಂದಾಲ್ ವಿಚಾರದಲ್ಲಿ ಸರ್ಕಾರದ ವಿರುದ್ದ ಬಹಿರಂಗವಾಗಿಯೇ ಪತ್ರ ಬರೆದಿದ್ದ ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಅವರ ಮೇಲೆ ಕಾಂಗ್ರೆಸ್ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಇನ್ನೋರ್ವ ಅನರ್ಹ ಶಾಸಕ ಮುನಿರತ್ನ ಮಾತನಾಡಿ, ನಾವಷ್ಟೇ ಅತೃಪ್ತರಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ 75 ಶಾಸಕರೂ ಅತೃಪ್ತರೇ. ಕಾಂಗ್ರೆಸ್ ಈಗ ಮನೆಯೊಂದು ಮೂರು ಗುಂಪು ಎಂಬಂತಾಗಿದೆ. ಸರ್ಕಾರ ಉರುಳಿಸಲು ನಮಗೆ ಪ್ರಚೋದನೆ ಮಾಡಿದವರು ಯಾರು, ರಾಹುಲ್ ಗಾಂಧಿ ಜತೆ ಚರ್ಚೆ ಮಾಡಿದ್ದು ಯಾರು, ದೇವೇಗೌಡ , ರಾಹುಲ್ ಗಾಂಧಿ ಜತೆ ಏನು ಚರ್ಚೆ ಮಾಡಿದ್ದರು ಎಂಬುದೆಲ್ಲವೂ ಬಹಿರಂಗವಾಗಬೇಕು. ಮೈತ್ರಿ ಸರ್ಕಾರ ಪತನವಾಗಬೇಕೆಂಬುದು ನಮ್ಮ 14 ಶಾಸಕರ ಅಪೇಕ್ಷೆಯಷ್ಟೇ ಆಗಿರಲಿಲ್ಲ. ಇದು ಬಹುತೇಕರ ಅಪೇಕ್ಷೆವಾಗಿತ್ತು ಎಂದು ಕಿಡಿಕಾರಿದರು