ಬೆಂಗಳೂರು, ಮೇ 10, ಲಾಕ್ ಡೌನ್ ಅವಧಿಯಲ್ಲಿ ತಾವು ಕೈಗೊಂಡ ಸಂಪೂರ್ಣ ಮದ್ಯ ನಿಷೇಧದ ದಿಟ್ಟ ನಿರ್ಧಾರದಿಂದಾಗಿ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಜನರ ಆರೋಗ್ಯ ನಂಬಲಸಾಧ್ಯ ರೀತಿಯಲ್ಲಿ ಸುಧಾರಿಸತೊಡಗಿತು, ಹಣ ಉಳಿತಾಯವಾಗತೊಡಗಿತು. ಆದ್ದರಿಂದ ಈ ತಕ್ಷಣವೇ ರಾಜ್ಯದಲ್ಲಿ ತೆರೆದಿರುವ ಎಲ್ಲಾ ಹೆಂಡದಂಗಡಿಗಳನ್ನು ತಕ್ಷಣ ಮುಚ್ಚಿಸಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಬೆಂಗಳೂರು ಪರಿಸರ ಪ್ರತಿಷ್ಠಾನದ ಅಧ್ಯಕ್ಷ ಅ.ನಾ.ಯಲ್ಲಪ್ಪ ರೆಡ್ಡಿ, ಗ್ರಾಮ ಸೇವಾ ಸಂಘದ ಪ್ರಸನ್ನ ಸೇರಿದಂತೆ ಹಲವು ಗಣ್ಯರು, ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದರಿಂದ ಕುಟುಂಬಗಳಲ್ಲಿ, ಸಮಾಜದಲ್ಲಿ ಹಿಂಸೆ, ದೌರ್ಜನ್ಯಗಳು ಬಹುತೇಕ ನಿಂತೇಹೋದವು. ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು. ಮದ್ಯವ್ಯಸನಿಗಳು ಪ್ರಾರಂಭದಲ್ಲಿ ಮಾನಸಿಕ ಮತ್ತು ದೈಹಿಕ ಕ್ಷೋಭೆಗೆ ಒಳಗಾದರೂ, ನಂತರದಲ್ಲಿ ಅದರಿಂದ ಹೊರಬಂದು ಸಮಚಿತ್ತ ಗಳಿಸಿಕೊಂಡರು. ಪ್ರತಿನಿತ್ಯ ತಮ್ಮ ಮೇಲಾಗುವ ದೈಹಿಕ, ಮಾನಸಿಕ ಹಿಂಸೆಯಿಂದ ನಲುಗಿಹೋಗಿದ್ದ ಕುಟುಂಬದ ಮಹಿಳೆಯರು, ಮಕ್ಕಳು ಎಷ್ಟೋ ಕಾಲದಿಂದ ಕಳೆದುಕೊಂಡಿದ್ದ ಸುಖ-ಸಂತೋಷ, ನೆಮ್ಮದಿಯನ್ನು ಮತ್ತೆ ಕಾಣತೊಡಗಿದರು. ಇದಕ್ಕೆ ಕಾರಣಕರ್ತರಾದ ತಮ್ಮನ್ನು ಮನಸಾರೆ ಅಭಿನಂದಿಸತೊಡಗಿದರು. ಈತನ್ಮಧ್ಯೆ ಬಂದ ಒಂದು ವರದಿ ಶೇ. 70ರಷ್ಟು ಮದ್ಯವ್ಯಸನಿಗಳು ಈಗಾಗಲೇ ಅದರಿಂದ ಹೊರಬಂದಿರುವುದಾಗಿ ಹೇಳಿತು. ಒಟ್ಟಿನಲ್ಲಿ ನಮ್ಮ ರಾಜ್ಯ ಮದ್ಯಮುಕ್ತ ಸಮಾಜದ ಹಾದಿಯಲ್ಲಿ ಸುಸೂತ್ರವಾಗಿ ಮುನ್ನಡೆದಿತ್ತು ಎಂದು ತಿಳಿಸಿದ್ದಾರೆ.
ಆದರೆ, ಇದೆಲ್ಲಾ ಈಗ ನುಚ್ಚುನೂರಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ಬೇಕು ಎನ್ನುವ ಕಾರಣಕ್ಕೆ ಲಾಕ್ ಡೌನ್ ಇನ್ನೂ ಮುಗಿಯದೇ ಇರುವಾಗಲೇ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಕಳೆದ ಕೆಲ ದಿನಗಳಿಂದ ಮದ್ಯದಂಗಡಿಗಳ ಮುಂದೆ, ಸಮುದಾಯಗಳಲ್ಲಿ, ಕುಟುಂಬಗಳಲ್ಲಿ ನಡೆಯುತ್ತಿರುವ ಕುಡುಕರ ಆಟಾಟೋಪಗಳನ್ನು; ಅಮೂಲ್ಯ ಜೀವಗಳು ಬೆಲೆಯೇ ಇಲ್ಲದಂತೆ ನಾಶವಾಗಿಹೋಗುತ್ತಿರುವುದನ್ನು ನೋಡುತ್ತಿದ್ದರೆ ಈ ಸಾಮಾಜಿಕ ಪಿಡುಗಿನ ಭೀಕರತೆ ಸ್ಪಷ್ಟವಾಗುತ್ತಿದೆ. ಜನರ ನೆಮ್ಮದಿ, ಆರೋಗ್ಯ, ಘನತೆಗಳು ನುಚ್ಚುನೂರಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಸಂಪೂರ್ಣ ಕದಡಿಹೋಗುತ್ತಿದೆ. ಹಿಂಸೆ, ದೌರ್ಜನ್ಯ, ಅಪರಾಧಗಳು ಎಲ್ಲೆಡೆ ತಾಂಡವವಾಡುತ್ತಿವೆ. ಮಹಿಳೆಯರ ಬದುಕುಗಳನ್ನಂತೂ ಅಕ್ಷರಶಃ ಪಣಕ್ಕಿಟ್ಟಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಂಡದಂಗಡಿಗಳನ್ನು ತೆರೆಯುವ ನಿರ್ಧಾರದಿಂದ ಕೊರೋನಾ ಸೋಂಕು ರಾಜ್ಯದಲ್ಲಿ ವೇಗವಾಗಿ, ವ್ಯಾಪಕವಾಗಿ ಹರಡಲು ಸರ್ಕಾರವೇ ಅನುವುಮಾಡಿಕೊಟ್ಟಂತಾಗಿದೆ. ಲಾಕ್ ಡೌನ್ ಎನ್ನುವುದಕ್ಕೆ ಅರ್ಥವೇ ಇಲ್ಲದಂತಾಗಿದೆ. ಈ ಸಮಯದಲ್ಲಿ ರೋಗ ನಿರೋಧಕತೆ ಬೆಳೆಸಿಕೊಳ್ಳಬೇಕಾದ ಜನ ಮದ್ಯಪಾನದಿಂದ ಮತ್ತಷ್ಟು ದುರ್ಬಲರಾಗಿ ಕೊರೋನ ಸಾವಿಗೆ ಸುಲಭವಾಗಿ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ. ಮದ್ಯದ ಮೇಲಿನ ತೆರಿಗೆಯಿಂದ ಸರ್ಕಾರಕ್ಕೆ ಆದಾಯವಿದೆಯೆನ್ನುವುದಾದರೆ, ಅದರ ದುಪ್ಪಟ್ಟು ನಷ್ಟ ಅದರ ದುಷ್ಪರಿಣಾಮದಿಂದ ಆಗುತ್ತಿರುವುದನ್ನು 'ನಿಮ್ಹ್ಯಾನ್ಸ್'ನ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಹೀಗಿದ್ದ ಮೇಲೆ ಆದಾಯದ ಪ್ರಶ್ನೆಯಾದರೂ ಎಲ್ಲಿ ಬಂತು? ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾರ್ಮಿಕರ, ರೈತರ ಹಿತರಕ್ಷಣೆಗೆ ತಾವು ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಈ ಹಣ ನೇರವಾಗಿ ಹೆಂಡದಂಗಡಿಗೆ ರವಾನೆಯಾಗುವ ಸತ್ಯವನ್ನು ತಾವು ಕಾಣಲಾರಿರೇ? ಮಕ್ಕಳ ಶಾಲಾ ಶುಲ್ಕಕ್ಕಾಗಿ ಕೂಡಿಟ್ಟ ಹಣ, ರೈತರು ತಮ್ಮ ಮುಂಗಾರು ಕೃಷಿ ಕಾರ್ಯಗಳಿಗೆ, ಬೀಜ-ಗೊಬ್ಬರಗಳಿಗೆ ಜೋಡಿಸಿಟ್ಟ ಹಣ, ಕಾರ್ಮಿಕರು ಸಂಸಾರದ ಖರ್ಚಿಗೆ ಒಟ್ಟು ಮಾಡಿದ ಹಣವೆಲ್ಲವೂ ಈಗ ಹೆಂಡದಂಗಡಿಯವನ ಪಾಲಾಗುತ್ತಿರುವ ಸತ್ಯವನ್ನು ಮುಚ್ಚಿಡಲು ಸಾಧ್ಯವೇ? ಹೀಗಾದರೆ ಮುಂದಿನ ಗತಿ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ಈ ವಿಚಾರಗಳ ಹಿನ್ನೆಲೆಯಲ್ಲಿ, ಈ ತಕ್ಷಣವೇ ರಾಜ್ಯದಲ್ಲಿ ತೆರೆದಿರುವ ಎಲ್ಲಾ ಹೆಂಡದಂಗಡಿಗಳನ್ನು ತಕ್ಷಣ ಮುಚ್ಚಿಸಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇವೆ. ಇಲ್ಲದಿದ್ದಲ್ಲಿ ಜನಸಾಮಾನ್ಯರ ನೋವು, ಸಂಕಟಗಳು ಬುಗಿಲೆದ್ದು ಬಂದು ಪರಿಸ್ಥಿತಿ ಕೈಮೀರಿಹೋಗುವುದರಲ್ಲಿ ಸಂಶಯವಿಲ್ಲ. ಹಾಗಾಗಲು ತಾವು ಖಂಡಿತಾ ಅವಕಾಶ ಕೊಡಲಾರಿರಿ, ಈ ತಕ್ಷಣವೇ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸುತ್ತೀರಿ ಎಂದು ಅಚಲವಾಗಿ ನಂಬುತ್ತೇವೆ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪತ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಜೆ. ಎಂ. ವೀರಸಂಘಯ್ಯ,
ಕುರುಬೂರು ಶಾಂತಕುಮಾರ್, ಜೆ. ಸಿ. ಬಯ್ಯಾ ರೆಡ್ಡಿ, ಲಕ್ಷ್ಮೀನಾರಾಯಣ ನಾಗವಾರ, ವಿ. ನಾಗರಾಜ, ಮಾವಳ್ಳಿ ಶಂಕರ್, ಎನ್. ನಾಗರಾಜ್, ವೋಡೆ.ಪಿ.ಕೃಷ್ಣ, ಬಸವರಾಜ ಗುರಿಕಾರ, ಡಾ| ವಿ. ಪಿ. ನಿರಂಜನಾರಾಧ್ಯ, ಎಲ್. ಕಾಳಪ್ಪ, ಅಲಿಬಾಬಾ, ಪ್ರೊ. ಹನುಮಂತು, ಡಾ| ಗೋಪಾಲ ದಾಬಡೆ ಅವರು ಸಹಿ ಹಾಕಿದ್ದಾರೆ.