ಮಹಾರಾಷ್ಟ್ರದ ನಾಯಕರೇ.. ಕನ್ನಡ ನೆಲ ಕಬಳಿಸುವ ಮುನ್ನ ಕನ್ನಡ ನಾಡಿನ ಇತಿಹಾಸವನ್ನೊಮ್ಮೆ ಓದಿ ನೋಡಿ...!

ಈ ಮಹಾರಾಷ್ಟ್ರ ರಾಜ್ಯದ ರಾಜಕಾರಣಿಗಳಿಗೆ ಬಹುಶಃ ಬುದ್ಧಿ ಬ್ರಮಣೆ ಆದಂತೆ ಕಾಣುತ್ತಿದೆ. ಅಧಿಕಾರದ ಗದ್ದುಗೆ ಏರಿದ ತಕ್ಷಣವೇ ಅದೇನಾಗುತ್ತದೆಯೋ ಗೊತ್ತಿಲ್ಲ ನಮ್ಮ ರಾಜ್ಯದ ನೆಲವನ್ನು ಕಬಳಿಸುವುದಕ್ಕೆಂದು ಹಗಲುಗನಸು ಕಾಣುವುದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಭಾಷಾವಾರು ಪ್ರಾಂಥಗಳ ರಚನೆಯಾಗಿ ಇಷ್ಟು ವರ್ಷಗಳು ಗತಿಸಿದರೂ ಕೂಡ ಅನ್ಯರ ಭೂಮಿಯ ಮೇಲಿನ ವ್ಯಾಮೋಹ ಈ ಅಡಕಸಬಿ ನಾಯಕುರಗಳಿಗೆ ಹೋಗಿಲ್ಲ. ಅದರಲ್ಲೂ ತಮ್ಮ ರಾಜ್ಯದಲ್ಲಿ ಏನಾದರೂ ನಡೆಯಬಾರದು ನಡೆದು ಜನಗಳು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎನ್ನುವುದು ಗೊತ್ತಾಯಿತೆಂದರೆ ಸಾಕು ನಮ್ಮ ರಾಜ್ಯದ ಗಡಿಯನ್ನು ತೋರಿಸಿ ಅವರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಅವರೋ ಇವರು ಮಾಡುವ ಸಂಚಿನ ಭಾಗವಾಗಿ ಕನ್ನಡಿಗರ ವಿರುದ್ಧ ಗುಡುಗುವಂತೆ ಮಾಡಿ ಟುಸ್ ಪಟಾಕಿಗಳಂತೆ ಉರಿದು ಹೋಗುತ್ತಾರೆ. ಮತ್ತೆ ಕೆಲವು ದಿನಗಳ ಕಾಲ ಹಾಗೆ ಉಳಿದು ಅನುಕೂಲಕ್ಕೆ ತಕ್ಕಂತೆ ಗಡಿ ವಿವಾದವು ಮೆಲ್ಲನೆ ಮುನ್ನಲೆಗೆ ಬರುತ್ತದೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಕನ್ನಡಿಗರ ನೆಲದ ಭಾಗಗಳನ್ನು ನಮ್ಮದೆನ್ನುತ್ತ ತಂಟೆ ಮಾಡುವ ಮಹಾರಾಷ್ಟ್ರಕ್ಕೆ ಅಕ್ಕಲಕೋಟೆ ಸೊಲ್ಲಾಪುರ ನಮ್ಮ ಭಾಗಗಳು ಎಂದು ಹೇಳಿದರೆ ಸಾಕು ನಕಶಿಕಾಂತ ಉರಿದು ಹೋಗುತ್ತದೆ. ಇವರ ಬೇಡಿಕೆಯು ನ್ಯಾಯ ಸಮ್ಮತವೇ? ಅಥವಾ ಆಮಿಶದಿಂದ ಕೂಡಿರುವಂತದೇ ಎನ್ನುವುದನ್ನು ಪರೀಶೀಲನೆ ಮಾಡುವುದಕ್ಕಾಗಿಯೇ ಮಹಾಜನ್ ಆಯೋಗವನ್ನು ರಚನೆ ಮಾಡಿದರು. ಈರ್ವರ ಒಪ್ಪಿಗೆಯಿಂದ ರಚಿತವಾದ ಈ ಆಯೋಗವು ನೀಡಿದ ವರದಿಯನ್ನು ಕನ್ನಡಿಗರು ಒಪ್ಪಿಕೊಂಡರು ಕೂಡ ತನ್ನ ಕ್ಯಾತೆಯನ್ನು ಮುಂದುವರಿಸಿರುವ ಮಹಾರಾಷ್ಟ್ರ ಮಹಾಜನ್ ವರದಿಯನ್ನು ಯತಾವತ್ತಾಗಿ ಜಾರಿಗೊಳಿಸುವುದನ್ನು ವಿರೋಧಿಸುತ್ತಲೇ ಬಂದಿತು. ಪರಿಣಾಮವಾಗಿ ಅಂದು ಪ್ರಾರಂಭವಾಗಿರುವ ಮಹಾರಾಷ್ಟ್ರ ಕರ್ನಾಟಕದ ಗಡಿ ತಕರಾರು ಇಂದಿಗೂ ಕೂಡ ಮುಂದುವರಿಯುತ್ತಲೇ ಹೊರಟಿರುವುದು ಮಹಾರಾಷ್ಟ್ರದ ಪಾಖಂಡಿತನವನ್ನು ಎತ್ತಿ ತೋರಿಸುತ್ತದೆ. ಶಿವಸೇನೆ ಅಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಉದ್ಧವಠಾಕ್ರೆ ಬೆಳಗಾವಿಯನ್ನು ಪಡೆದೇ ತಿರುತ್ತೇವೆ. ಕರ್ನಾಟಕಕ್ಕೆ ಒಂದಿಚೂ ಜಾಗ ನೀಡುವುದಿಲ್ಲ ಎಂದು ಅಬ್ಬರಿಸಿ ಬೊಬ್ಬಿರಿದು ಕೊನೆಗೆ ಹೇಳ ಹೆಸರಿಲ್ಲದ ಹಾಗೆ ತಮ್ಮವರಿಂದಲೇ ಅಧಿಕಾರ ಕಳೆದುಕೊಂಡ. ಈಗ ಅಧಿಕಾರಕ್ಕೆ ಬಂದಿರುವ ಏಕನಾತ ಶಿಂಧೆ ಜತ್ತ ತಾಲೂಕಿನ ಸುತ್ತಮುತ್ತಲಿರುವ ಕನ್ನಡ ಪ್ರದೇಶಗಳನ್ನು ಹಾಗೂ ಕಾರವಾರ, ನಿಪ್ಪಾಣಿ, ಬೆಳಗಾವಿ ನಮ್ಮದೆನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡಿದ್ದಾರೆ. ವಿಚಿತ್ರ ಎಂದರೆ ಜತ್ತ ತಾಲೂಕಿನ ಎಲ್ಲ ಹಳ್ಳಿಗಳು ನಾವು ಕರ್ನಾಟಕದವರು ನಮ್ಮದು ಕರ್ನಾಟಕ ಭಾಗ ಎಂದು ಹೇಳುವುದನ್ನು ಕೇಳಿದ ಮೇಲೂ ತನ್ನ ಮೊಂಡತನವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಶಿಂಧೆಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಆದರೂ ಇವರು ಪದೇ ಪದೇ ಮಾಡುತ್ತಿರುವ ಈ ಕಿರಿಕಿರಿಯಿಂದಾಗಿ ನಮ್ಮ ಜನಗಳು ರೋಷಿ ಹೋಗಿದ್ದಾರೆ. ಅಷ್ಟಕ್ಕೂ ಇವರೆಲ್ಲ ಈ ರೀತಿ ಧೈರ್ಯದಿಂದ ನಮ್ಮ ನೆಲವನ್ನು ಕಬಳಿಸುವುದಕ್ಕೆ ಮುಂದಾಗುತ್ತಾರಲ್ಲ ಇದಕ್ಕೆ ಕಾರಣವೇನು ಎನ್ನುವುದನ್ನು ಒಮ್ಮೆ ಆಲೋಚನೆ ಮಾಡಿದರೆ ಉತ್ತರ ನಮ್ಮವರೇ ಎನ್ನುವುದಂತೂ ಸ್ಪಷ್ಟ. ಅದಕ್ಕೆ ಹಲವಾರು ನಿದರ್ಶನಗಳನ್ನು ಪ್ರತಿ ವರ್ಷವು ನೋಡುತ್ತಲೇ ಬಂದಿದ್ದೇವೆ. ಈಗ ಮತ್ತದೇ ಹಾಡು ಹಾಡುತ್ತಿದ್ದಾರೆ. ಆದರೆ ಹಾಡುವುದಲ್ಲ ಗಡಿಯಲ್ಲಿ ನಿಂತು ಬಾಯಿ ಬಡಿದುಕೊಂಡರೂ ಕೂಡ ಕರ್ನಾಟಕದ ಒಂದಿಂಚೂ ಜಾಗವನ್ನೂ ಸಹ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುವುದಂತೂ ಸ್ಪಷ್ಟ. ಆದರೂ ನಮ್ಮ ರಾಜ್ಯದ ಅನ್ನವನ್ನುಂಡು ನಮ್ಮ ಕಾಲನ್ನೇ ಕಚ್ಚುವ ಕೆಲವು ಜನಗಳಿಂದಾಗಿ ಮಹಾರಾಷ್ಟ್ರ ಇಷ್ಟೋಂದು ಮೆರೆಯುತ್ತಿದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಬೇಡ ಸಧ್ಯದ ಬೆಳಗಾವಿಯಲ್ಲಿ ಗಡಿ ವಿಷಯವಾಗಿ ತ್ವೇಷಮಯ ವಾತಾವರಣವಿದೆ ಬೆಳಗಾವಿ ಭೇಟಿಗೆ ಬರಬೇಡಿ ಎಂದು ಮಹಾರಾಷ್ಟ್ರದ ಸಚಿವರಿಗೆ ಕರ್ನಾಟಕದ ಮುಖ್ಯಮಂತ್ರಿಗಳು ಹೇಳಿದರೆ ಬೆಳಗಾವಿಗೆ ಹೋಗಿಯೇ ತೀರುತ್ತೇವೆ. ನಮ್ಮನ್ಯಾರು ತಡೆಯುತ್ತಾರೆ ನೋಡೋಣ ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ ದೇಸಾಯಿ ಸವಾಲು ಹಾಕುತ್ತಾರೆಂದರೆ ಇವರೆದಷ್ಟು ದಿಮಾಕಿರಬೇಡ ಹೇಳಿ? ಮದುವೆಗೋ ಮುಂಜಿಗೋ ಬಂದು ಉಂಡು ಹೋದರೆ ಪರವಾಗಿಲ್ಲ. ಅದನ್ನು ಬಿಟ್ಟು ಉಂಡು ಹೋದ ಕೊಂಡು ಹೋದ ಎನ್ನುವ ಭಾವೆಯನ್ನಿಟ್ಟುಕೊಂಡು ಕನ್ನಡ ನೆಲಕ್ಕೆ ಕಾಲಿಟ್ಟು ಪುಂಡಾಟ ಮಾಡಲು ಮುಂದಾದರೆ ಮುಂದೆ ನಡೆಯುವುದೇ ಬೇರೆಯಾಗುತ್ತದೆ. 

ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ನಮ್ಮಲ್ಲಿ ಭಾಷಾಭಿಮಾನ ಕಡಿಮೆಯೇ. ನನ್ನ ನಾಡು ಎನ್ನುವ ಭಾವನೆ ಕಡಿಮೆ ಎಂದೇ ಹೇಳಬೇಕು. ಈ ಭಾವನೆಗಳನ್ನೆ ಬಂಡವಾಳ ಮಾಡಿಕೊಂಡು ಅನ್ಯಭಾಷಿಗರು ನಮ್ಮ ಮೇಲೆ ಅನ್ಯಾಯ ಮಾಡುತ್ತಿರುವುದಂತೂ ವಾಸ್ತವ ಸತ್ಯ. ಅವರು ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದಕ್ಕಿಂತ ನಾವು ಅನ್ಯಾಯ ಮಾಡುವುದಕ್ಕೆ ದಾರಿ ಮಾಡಿಕೊಡುತ್ತಿದ್ದೆವೆ ಎನ್ನುವುದು ಸತ್ಯವಾದ ಮಾತು. ಇದಕ್ಕೆ ಬೆಳಗಾವಿಯಲ್ಲಿ ಪ್ರತಿವರ್ಷ ಎಂಇಎಸ್ ಮಾಡುತ್ತಿರುವ ಪುಂಡಾಟಿಕೆಯೇ ಸಾಕ್ಷಿ. ಕನ್ನಡದ ಅನ್ನ, ಕನ್ನಡದ ನೀರು, ಕನ್ನಡದ ಗಾಳಿ, ಕನ್ನಡದ ನೆಲ, ಕನ್ನಡಿಗರ ಜೊತೆ ಜೀವನ ಮಾಡುತ್ತ ಕನ್ನಡ ನೆಲವನ್ನೇ ಕಬಳಿಸಲು ಹೊರಟಿರುವ ಇವರು ಉಂಡ ಮನೆಗೆ ದ್ರೋಹ ಮಾಡುವ ಮನೋಭಾವ ವ್ಯಕ್ತ ಪಡಿಸುತ್ತಿದ್ದರೂ ಕೂಡ ಸಹಿಕೊಂಡು ಕೂಡುತ್ತಿರುವ ಕನ್ನಡಿಗರನ್ನು ಕಂಡರೆ ನಾವುಗಳು ನಮ್ಮತನವನ್ನು ಮರೆತಿದ್ದಿವಾ ಎನ್ನಿಸುತ್ತಿದೆ. ಬೆಳಗಾವಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಭಾವುಟವನ್ನು ಹಿಡಿದು ಕುಣಿದಾಡಿದನೆನ್ನುವ ಕಾರಣಕ್ಕಾಗಿ ಕನ್ನಡಿಗನನ್ನು ಥಳಿಸಿದರೂ ನಾವು ನೋಡಿಕೊಂಡು ಸುಮ್ಮನಿರುವುದು ಯಾವು ನ್ಯಾಯ ಹೇಳಿ. ಬೆಳಗಾವಿಯಲ್ಲಿ ಎನಾದರೆ ನಮಗೇನು ಎನ್ನುತ್ತ ಪ್ರಾಪಂಚಿಕ ಸುಖಗಳ ಮಧ್ಯದಲ್ಲಿ ಕಳೆದುಹೋಗಿರುವ ನಾವುಗಳು ನಾಡು ನುಡಿಯನ್ನು ಮರೆಯುತ್ತಿದ್ದೇವೆ. ಯಾರೋ ಎಲ್ಲಿಂದಲೋ ಬಂದವರು, ಅನ್ಯ ರಾಜ್ಯದಲ್ಲಿದ್ದುಕೊಂಡು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡುತ್ತಾರೆ. ನಮ್ಮ ನೆಲವನ್ನು ಗಬಳಿಸುವ ಹುನ್ನಾರ ನಡೆಸಿದವರು ನಮ್ಮ ನಾಡು ನಮ್ಮದು ಎಂದು ಹೇಳುವ ನಮ್ಮ ಮುಖ್ಯಮಂತ್ರಿಗಳನ್ನು ಕಳ್ಳನೆಂದು ಜರಿಯುತ್ತಾರೆ. ಕೆಲವು ಜನ ಕನ್ನಡಪರ ಹೋರಾಟಗಾರರನ್ನು ಬಿಟ್ಟರೆ ನಾವ್ಯಾರು ಅದನ್ನು ಖಂಡಿಸುವ ಗೋಜಿಗೆ ಹೋಗುವುದಿಲ್ಲ. ಇದೇ ಕಾರಣಕ್ಕಾಗಿಯೇ ಅವರು ಸದಾ ನಮ್ಮ ನೆಲವನ್ನು ನುಂಗುವುದಕ್ಕೆ ಹೊಂಚು ಹಾಕಿ ಸಂಚು ಮಾಡುತ್ತ ಕೂರುತ್ತಾರೆ. ಆದರೂ ಅದನ್ನು ಸಹಿಸಿಕೊಳ್ಳುವ ನಾವು ನಮ್ಮ ಮೇಲೆಯೇ ದೌರ್ಜನ್ಯ ಮಾಡುತ್ತಿದ್ದರು ನಾಚಿಕೆಗೇಡಿತನದ ಜೀವನ ಮಾಡುತ್ತಿದ್ದವೆ. ಇದನ್ನು ನೋಡಿದಾಗ ಚುಟುಕು ಕವಿ ದುಂಡಿರಾಜರು ಗೀಚಿದ ಕವಿತೆಯ ಸಾಲುಗಳಿಂದು ನೆನಪಾಗುತ್ತಿವೆ 

ಆಸ್ತಿಯ ಮೇಲಿಟ್ಟ ಮೋಹ 

ಮಾಸ್ತಿಯ ಮೇಲಿಟ್ಟಿದ್ದರೆ 

ಪ್ರಾಪಂಚಿಕ ಸುಖಗಳ ಮೇಲಿಟ್ಟ ಮೋಹ 

ಪಂಪನ ಮೇಲಿಟ್ಟದ್ದರೆ 

ಹೊನ್ನಿನ ಮೇಲಿಟ್ಟಿರುವ ಮೋಹ 

ರನ್ನನ ಮೇಲಿಟ್ಟಿದ್ದರೆ 

ಮುತ್ತು ರತ್ನಗಳ ಮೇಲಿಟ್ಟ ಮೋಹ 

ರತ್ನಾಕರನ ಮೇಲಿಟ್ಟಿದ್ದರೆ 

ಕೇಶರಾಶಿಯ ಮೇಲಿಟ್ಟ ಮೋಹ 

ಕೇಶಿರಾಜನ ಮೇಲಿಟ್ಟಿದ್ದರೆ 

ಕನ್ನಡಿಯ ಮೇಲಿಟ್ಟ ಮೋಹ 

ಎನ್ನ ಕನ್ನಡದ ಮೇಲಿಟ್ಟಿದ್ದರೆ 

ಕನ್ನಡಾಂಭೆಯ ಗರ್ಭಕ್ಕೆ ಭಾರವಾಗುವ ಬದಲು 

ಬಂಗಾರವಾಗುತ್ತಿತ್ತು ನಮ್ಮ ಬಾಳು. 

ಹೌದು ಕವಿ ಗೀಚಿದ ಈ ಸಾಲುಗಳು ಎಷ್ಟು ಸತ್ಯವೆನ್ನುವುದು ಇಂದು ಅರ್ಥವಾಗುತ್ತಿದೆ. ನಾವುಗಳೆಲ್ಲ ವೈಯಕ್ತಿಕ ಬದುಕಿನ ಬೆನ್ನತ್ತಿ ಬದುಕು ಕಲ್ಪಿಸಿಕೊಟ್ಟ ತಾಯ್ನೆಲ ತಾಯ್ನುಡಿಯನ್ನು ಬೆರೋಬ್ಬರಿಗೆ ಮಾರಿಕೊಳ್ಳುವುದರೊಂದಿಗೆ ಗುಲಾಮಗಿರಿಯ ಬದುಕಿಗೆ ಶರಣಾಗುತ್ತಿದ್ದೇವೆ. ಅದರಲ್ಲೂ ಬೆಳಗಾವಿಯಂತ ಹುಟ್ಟು ಹೋರಾಟಗಾರರ ಗಟ್ಟಿ ಭೂಮಿ, ಅಪ್ಪಟ ನಾಡಪ್ರೇಮಿಗಳ ಅದ್ಭುತ ನೆಲ, ಚನ್ನಮ್ಮನಂತ ಸಾಹಸಿ ಹುಟ್ಟಿದ ತವರು, ರಾಯಣ್ಣನಂತ ಪರಾಕ್ರಮಿ ಜನಿಸಿದ ಜಿಲ್ಲೆ, ನಾಡಿಗಾಗಿ ನುಡಿಗಾಗಿ ಪ್ರಾಣವನ್ನೆ ಫಣಕ್ಕಿಟ್ಟು ರಾಜ್ಯದ ಮಾನವನ್ನುಳಿಸಲು ಹೋರಾಡಿದ ಹೋರಾಟಗಾರರನ್ನು ಪಡೆದ ಪುಣ್ಯಭೂಮಿ, ಪರಂಗಿ ಜನಗಳನ್ನೇ ಫೀರಂಗಿಯಲ್ಲಿ ಹೊಡೆದುರುಳಿಸಿ ಇತಿಹಾಸ ಪುಟದಲ್ಲಿ ಕರ್ನಾಟಕದ ಕುರಿತು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಮಾಡಿದ ಗಂಡುಗಲಿಗಳ ಗಂಡು ಮೆಟ್ಟಿದ ನೆಲ. ಆದರೆ....ಇಂದು ಗಂಡು ಮೆಟ್ಟಿದ ನೆಲವನ್ನು ಕಬಳಿಸುವ ಭಂಡ ಮಾತುಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳುತ್ತಲಿದ್ದರೂ ನಾವುಗಳು ಸುಮ್ಮನಿರುವುದು ನಿಜಕ್ಕೂ ನಮ್ಮ ಕನ್ನಡಿಗ ನಿದ್ರೆಗೆ ಜಾರುತ್ತಲಿದ್ದಾನಾ ಎನಿಸುತ್ತಿದೆ. ಅದರಲ್ಲೂ ಪಕ್ಕದ ಮಹಾರಾಷ್ಟ್ರದಲ್ಲಿ ಕರ್ನಾಟಕ ವಿರೋಧಿ ಹೇಳಿಕೆ ಬರುತ್ತಿದ್ದಂತೆ ಬೆಳಗಾವಿಯಲ್ಲಿರುವ ಎಂಇಎಸ್ ಪುಂಡರು ಜಗತ್ತನ್ನೇ ಗೆದ್ದಂತೆ ಬೀಗುತ್ತಾನೆ. ಇಂಥವರನ್ನು ಬೆಳೆಯಲು ಬಿಟ್ಟ ತಪ್ಪಿಗೆ ನಾವು ಇದನ್ನು ಅನುಭವಿಸಲೇ ಬೇಕೆ ಎನಿಸುತ್ತದೆ. ಅದರಲ್ಲೂ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾದರೆ ಇತ್ತ ಮಹಾ ಮೇಳಾವ ನಡೆಸುವುದಕ್ಕೆ ಎಂಇಎಸ್ ಪುಂಡರು ಮುಂದಾಗುತ್ತಾರೆಂದರೆ ಇವರದೆಂತ ಸೊಕ್ಕಿನ ನಡೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇದಲ್ಲದೇ ಹೋದಲ್ಲಿ ಪ್ರತಿಬಾರಿಯು ಮಹಾರಾಷ್ಟ್ರ ಸರ್ಕಾರ ಕಾಲು ಕೆರೆದು ಜನಗಳಕ್ಕೆ ಬಂದರೆ ನಮ್ಮಲ್ಲಿ ಅನ್ನವನ್ನು ಉಂಡ ಇಂತವರು ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಮೊದಲು ಅದನ್ನು ಹೋಗಲಾಡಿಸಬೇಕು. ಹಾಗೂ ಪ್ರತಿಯೊಬ್ಬ ಕನ್ನಡಿಗನೆದೆಯಲ್ಲೂ ಕನ್ನಡದ ಕೆಚ್ಚು ಮೂಡಿಸಬೇಕು. 

ನಾಡು ನುಡಿಗಾಗಿ, ಕರ್ನಾಟಕದ ಏಕೀಕರಣಕ್ಕಾಗಿ, ಹಲವು ಮಹಾತ್ಮರು ತಮ್ಮ ಪ್ರಾಣವನ್ನೇ ನೀಡಿದರು. ಚದುರಿ ಭಾಗವಾಗಿ ಹೋಗಿದ್ದ ಕನ್ನಡ ನೆಲವನ್ನು ಒಂದುಗೂಡಿಸಿದರು. ಕನ್ನಡಿಗರನ್ನೆಲ್ಲ ಒಂದೆಡೆ ಮಾಡಿ ಕರ್ನಾಟಕದ ನವನಿರ್ಮಾಣಕ್ಕಾಗಿ ಹಗಲು ರಾತ್ರಿ ಎನ್ನದೆ ಹೋರಾಡಿ ಯಶಸ್ವಿಯಾದರು. ಅದರೊಂದಿಗೆ ನಾವುಗಳೆಲ್ಲ ಕನ್ನಡಿಗನೆಂದು ಎದೆಯುಬ್ಬಿಸಿ ಹೇಳುವಂತೆ ಮಾಡಿದ ಆ ಮಹಾನ್ ಚೇತನಗಳಿಂದು ಕಣ್ಣಿರು ಹಾಕುವ ಹಾಗಾಗಿದೆ. ನಮ್ಮ ನಾಡಿನ ಭಾಗಗಳನ್ನು ತಮ್ಮೆದೆನ್ನುವ ಹೇಳಿಕೆ ನೀಡುತ್ತಿರುವ ಮಹಾರಾಷ್ಟ್ರದವರಿಗೆ ಬುದ್ಧಿ ಕಲಿಸದೇ ಹೋದರೆ ಅಂದು ಕಾಸರಗೋಡಿಗಾದ ಸ್ಥಿತಿ ನಾಳೆ ಬೆಳಗಾವಿಗೂ ಬರಬಹುದು ಎನ್ನುವುದಕ್ಕೆ ಇದು ಎಚ್ಚರದ ಕರೆ ಗಂಟೆಯಾಗಿದೆ. ಅಂದು ತೊಡೆತಟ್ಟಿ ನಿಲ್ಲುತ್ತಿದ್ದ ಕನ್ನಡಿಗನಿಂದು ಹೋಗಲಿ ಬಿಡು ಎಂದು ಕೈ ಕಟ್ಟಿ ಕುಳಿತುಕೊಳ್ಳುತ್ತಿರುವುದನ್ನು ನೋಡಿದರೆ ಕನ್ನಡಿಗ ಕರ್ನಾಟಕವನ್ನೇ ಮಾರೆತನಾ ಎನ್ನಿಸುತ್ತಿದೆ. ಅನ್ಯರು ಬಂದ ಕನ್ನಡ ನಾಡಲ್ಲಿ ಕೇಕೆ ಹಾಕುತ್ತಿದ್ದರೆ...; ಕನ್ನಡಿಗ ಮಾತ್ರ ಕಣ್ಣುಮುಚ್ಚಿಕುಳಿತಿದ್ದಾನೆ. ಇದನ್ನು ಕಂಡರೆ... ಕನ್ನಡಿಗನ ಕೆಚ್ಚೆದೆ ಎಲ್ಲಿ ಹೋಯಿತು? ಕನ್ನಡಿಗರ ಶೌರ್ಯ ಸತ್ತು ಹೋಯಿತೆ? ಎನ್ನುವ ಅನುಮಾನ ಮೂಡುತ್ತದೆ.  

ಕರ್ನಾಟಕ ಉದಯಿಸಿದ ದಿನ ಅಂದರೇ ನವೇಂಬರ್ 1 ಎಂದರೇ ಅದು ಕನ್ನಡಿಗರಿಗೆ ಹಬ್ಬ, ಕರ್ನಾಟಕದ ಜನತೆಯ ಪಾಲಿಗೆ ರಾಜ್ಯಾಭಿಮಾನದ ಪ್ರತೀಕ, ನಮ್ಮವರು ನಮಗಾಗಿ ಮಾಡಿದ ತ್ಯಾಗದ ಪ್ರತಿಫಲ, ಕನ್ನಡಿಗರ ಭಾಷಾಭಿಮಾನದ ಪ್ರತಿಬಿಂಬ. ಹೀಗಾಗಿ ಈ ಹಬ್ಬವನ್ನು ಇಡೀ ಕನ್ನಡ ನಾಡೇ ವಿಜೃಂಭಣೆಯಿಂದ ಆಚರಿಸುತ್ತದೆ. ಆ ದಿನ ಮಾತ್ರವಲ್ಲ ಇಡೀ ನವೆಂಬರ್ ತಿಂಗಳು ಕನ್ನಡಿಗರ ಹಬ್ಬವನ್ನಾಗಿ ನಾವು ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಇಡೀ ತಿಂಗಳು ಕರುನಾಡ ಪ್ರಜೆಯ ಮನದಲ್ಲಿನ ರಾಜ್ಯಾಭಿಮಾನ ಕಾವೇರಿಯಾಗಿ ಹರಿಯುತ್ತಿರುತ್ತದೆ. ಇಂಥ ಸಂಭ್ರದ ವಾತವರಣವನ್ನು ಹಾಳು ಮಾಡಿ ಸೂತಕದ ಮನೆಯಾಗಿಸುವ ಹೇಳಿಕೆ ನೀಡುವ  ಮಹಾರಾಷ್ಟ್ರ; ಪಕ್ಕದಲ್ಲಿದ್ದು ಪ್ರೀತಿ ನೀಡಿದ ನಮಗೇ ವಿಷವನ್ನು ಕಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ. ಕರ್ನಾಟಕ ರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ ಪ್ರಶ್ನೆ ಮಾಡುವ ಜನಗಳನ್ನೇ ದೂಷಿಸುತ್ತಾರೆ. ನಮ್ಮ ಅನ್ನವನುಂಡ ಜನಗಳಿಂದಲೇ ನಮ್ಮನ್ನು ದ್ವೇಷಿಸುವಂತೆ ಮಾಡುತ್ತಾರೆ. ಇದಕ್ಕೆಲ್ಲ ಕಾರಣ ಪ್ರತಿಭಾರಿಯೂ ನಡೆಯುವ ರಾಜ್ಯ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ರಾಜ್ಯ ಸರ್ಕಾರ ಮೃದುಧೋರಣೆ ತೋರುತ್ತಿರುವುದು ಇಂದು ನಮಗೆ ಶಾಪಾವಾಗುತ್ತಿದೆ. ರಾಜ್ಯ ರಾಜ್ಯಕಾರಣದಲ್ಲಿ ಎಂಇಎಸ್‌ಗೆ ಅವಕಾಶ ನೀಡದೇ ಇದ್ದರೆ ಬೆಳಗಾವಿಯಲ್ಲಿ ಅವರ ಪುಂಡಾಟಿಕೆ ನಿಲ್ಲುತ್ತದೆ. ಅದು ಪರೋಕ್ಷವಾಗಿ ಮಹಾರಾಷ್ಟ್ರದವರಿಗೆ ಚುರುಕು ಮುಟ್ಟಿಸಿದ ಹಾಗಾಗುತ್ತದೆ. ಅದನ್ನು ಬಿಟ್ಟು ಕನ್ನಡ ನಾಡಿನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಇಂದು ಬಾಯಿ ಬಡಿದುಕೊಂಡರೆ ಅತ್ತ ಕಡೆಯಿಂದ ನಮ್ಮ ನೆಲವನ್ನು ಕಿತ್ತುಕೊಳ್ಳುವ ಮಾತುಗಳು ಬರುತ್ತವೆಯೇ ವಿನಃ ಬದಲಾವಣೆ ಎಲ್ಲಿಂದ ಆಗುವುದಕ್ಕೆ ಸಾಧ್ಯ? ಇಷ್ಟಕ್ಕೆ ನಿಲ್ಲದೆ ಇತ್ತ ಇವರ ರಾಜ್ಯವಿರೋಧಿ ಕೆಲಸ ಮತ್ತೆ ಮತ್ತೆ  ಮುಂದುವರಿಯುತ್ತಲೇ ಇದೆ. ಅತ್ತ ಮಹಾರಾಷ್ಟ್ರ ಸುಮ್ಮನಿದ್ದವರನ್ನು ಕೆಣಕುವ ಕೆಲಸ ನಡೆದೆ ಇದೆ. ಇದಕ್ಕೆಲ್ಲ ಕಾರಣ ನಮ್ಮ ಸರ್ಕಾರವೆಂದರೇ ತಪ್ಪಗಲಾರದು. ತಪ್ಪು ಮಾಡಿದವರನ್ನು ಅಪ್ಪಿ ಮುದ್ದಾಡುವ, ತಿಪ್ಪೆ ಸಾರಿಸಿದ ಕೈಂಯಲ್ಲೇ ತುಪ್ಪ ಅನ್ನಾ ತಿನ್ನುವ, ಅಪ್ಪಿ ತಪ್ಪಿಯೂ ತಪ್ಪನ್ನು ಒಪ್ಪಿಕೊಳ್ಳದ ಇವರ ನಿಲುವುಗಳೇ ಇಂದು ಕನ್ನಡಿಗನ ಪಾಲಿಗೆ ಕಂಟಕವಾಗಿ ಕಾಡುತ್ತಿದೆ. ಈ ಕಾರಣ ಇಂಥ ಹೇಯ ಮನಸ್ಸಿನವರು ಕರ್ನಾಟಕದಲ್ಲಿ ಕೇಕೆ ಹಾಕಿ ಕೈ ತಟ್ಟಿ ನಗುತ್ತಿರುವುದು. ಇವರ ನಿಲುವುಗಳಿಗೆ ಸಮರ್ಥವಾಗಿ ಉತ್ತರಿಸಲಾಗದೇ ಕನ್ನಡಿಗನು ತಲೆ ತಗ್ಗಿಸಿ ನಿಲ್ಲುವಂತಾಗಿರುದು. 

ಮೇಹರ್‌ಚಂದ್ ಮಹಾಜನ್ ವರದಿ ಅನ್ವಯ ಬೇಳಗಾವಿ ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ. ಇದರ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ತೀರ​‍್ು ಬರುವವರೆಗೆ ಮೊದಲ್ಯಾರದ್ದಾಗಿತ್ತು ಈಗಲೂ ಬೆಳಗಾವಿ ಅವರದ್ದೆ. ಅಂದರೆ ಕನ್ನಡಿಗರದ್ದೆ. ಇದಕ್ಕೂ ಮೊದಲೇ ಮಹರಾಷ್ಟ್ರ ಏಕೀಕರಣ ಸಮಿತಿಯವರು ಬೆಳಗಾವಿಯನ್ನು ಮಹರಾಷ್ಟ್ರದ ಒಂದು ಭಾಗವಾಗಿ ಬಿಂಬಿಸುತ್ತಿದೆ. ಮತ್ತು ಅದಕ್ಕೆ ಮಾಹಾರಾಷ್ಟ್ರ ಬೆಂಬಲಿಸುತ್ತದೆ. ಅದರ ಪರಿಣಾಮವಾಗಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಅಸ್ತಿತ್ವ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿಗೆ ವಿಶೇಷವಾದ ಸ್ಥಾನಮಾನ ನೀಡಬೇಕು ಎನ್ನುವ ಕಾರಣದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಪ್ರತಿವರ್ಷ ಅಧಿವೇಶನ ನಡೆಸಲಾಗುತ್ತದೆ. ಅದೇ ಸಂದರ್ಭದಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದು ವಿರೋಧದ ನಡುವೆಯು ಮಹಾ ಮೇಳಾವ್ ಮಾಡುವುದರ ಮೂಲಕ ಎಂಇಎಸ್ ತನ್ನ ಉದ್ಧಟತನ ಪ್ರದರ್ಶನ ಮಾಡುತ್ತದೆ. ಮಹಾರಾಷ್ಟ್ರ ಸರ್ಕಾರ ಕನ್ನಡಿಗರನ್ನು ಕರ್ನಾಟಕ ಸರ್ಕಾರವನ್ನು ನಾಮರ್ಧನಂತೆ ಬಿಂಬಿಸುತ್ತದೆ. ಆದರೆ ಸರ್ಕಾರ ಮಾತ್ರ ಜಾಣ ಕುರುಡುತನ ಪ್ರದರ್ಶಿಸಿ ಸುಮ್ಮನಾಗುತ್ತದೆ. ಒಂದು ಬಾರಿ ಎಂಇಎಸ್ ನ ಶಾಸಕರಾಗಿದ್ದ ಸಂಭಾಜಿ ಪಾಟೀಲ್ ಹಾಗೂ ಅರವಿಂದ ಪಾಟೀಲ್‌ರು ಮಾಹಾಮೇಳಾವ್‌ನಿಂದ ನೇರವಾಗಿ ಸದನಕ್ಕೆ ಕೇಸರಿ ಪೇಠ ತೊಟ್ಟುಕೊಂಡು ಆಗಮಿಸಿ ಶಿಸ್ತು ಉಲ್ಲಂಘಿಸಿದರು. ನಂತರ ಸದನದಲ್ಲಿ ಮಾರಠಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿ ಸೊಕ್ಕು ಪ್ರದರ್ಶಿಸಿದರು. ನಂತರ ತಮಗೆ ಸದನದ ಎಲ್ಲ ಸೂಚನೆ ಸಹಿತ ಪತ್ರವ್ಯವಹಾರಗಳನ್ನು ಮರಾಠಿಯಲ್ಲಿ ನೀಡಬೇಕೆಂದು ಆಘ್ರಹಿಸಿ ಉದ್ಧಟತನ್ ಪ್ರದರ್ಶಿಸಿದರು. ಇರುವ ಬೆರಳೆಣಿಕೆಯ ಈ ಕಮಂಗಿಗಳು ಹೇಳಿದ್ದಕ್ಕೆ ಹೂಂ ಎಂದರೆ ಇಡೀ ಅಧಿವೇಶನವನ್ನೆ ಮರಾಠಿ ಭಾಷೆಯಲ್ಲಿ ನಡೆಸಬೇಕು ಎಂದು ಆಗ್ರಹಿಸುವಷ್ಟರ ಮಟ್ಟಿಗೆ ಸೊಕ್ಕಿದ್ದಾರೆ. ಅದಕ್ಕೆ ಕಾರಣ ಪ್ರತಿಬಾರಿಯು ಮಹಾರಾಷ್ಟ್ರ ಆಡುವ ಆಟವನ್ನು ಸಹಿಸಿಕೊಳ್ಳುತ್ತಿರುವುದು ಎನ್ನುವುದು ಸ್ಪಷ್ಟವಾಗುತ್ತದೆ. 

ಮಹಾರಾಷ್ಟ್ರದ ಬೆಂಬಲ ಪಡೆದು ಹಾರಾಡುವ ಎಂಇಎಸ್‌ನವರು ತಮ್ಮ ತಂಟೆಗೆ ಬಂದರೇ ಮಹರಾಷ್ಟ್ರದಲ್ಲಿರುವ ಕನ್ನಡಿಗರ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕುತ್ತೇವೆ. ಶಾಶ್ವತವಾಗಿ ಅವುಗಳನ್ನು ಮುಚ್ಚಿಸಿ ಬಿಡುತ್ತೇವೆ. ಅವರನ್ನೆಲ್ಲ ಬೀದಿಗೆ ತಂದು ಬಿಡುತ್ತೇವೆ ಹುಶಾರ್‌....! ಎಂದು ಕನ್ನಡಿಗರಿಗೆ ಎಚ್ಚರಿಸುತ್ತಾರೆ. ವಿಚಿತ್ರ ಎಂದರೆ ಅವರು ಎಲ್ಲಿದ್ದಾರೆ ಎಂಬುದನ್ನೇ ಮರೆತಿದ್ದಾರೆ. ಬೆಂಕಿ ಯಾರಿಗೆ ಹಚ್ಚಿದರು ಅದರ ಕೆಲಸ ಸುಡುವುದೆ. ಅದನ್ನು ಮಹರಾಷ್ಟ್ರದಲ್ಲಿ ಹಚ್ಚಿದರು ಅಷ್ಟೇ ಇಲ್ಲಾ ಬೆಳಗಾವಿಯಲ್ಲಿ ಹಚ್ಚಿದರು ಅಷ್ಟೇ. ಅದನ್ನು ವಿಚಾರ ಮಾಡಬೇಕು.  

ಜಯ ಭಾರತ ಜನನಿಯ ತನುಜಾತೆ 

ಜಯ ಹೇ ಕರ್ನಾಟಕ ಮಾತೆ 

ಜಯ ಸುಂದರ ನದಿವನಗಳ ನಾಡೆ 

ಜಯಹೇ ರಸ ಋಷಿಗಳ ಬೀಡೆ 

ಎಂದು ವಿಶ್ವ ಮಾನವ ಸಂದೇಶ ಸಾರಿದ ಕುವೆಂಪುರವರ ತತ್ವಗಳಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಕನ್ನಡಿಗರೇನು ಬಳೆ ತೊಟ್ಟಿಲ್ಲ. ಕೊಚ್ಚೆಯಲ್ಲಿ ಕಲ್ಲು ಎಸೆಯ ಬಾರದು ಎಂದು ಸುಮ್ಮನಾಗುತ್ತಿದೆ. ಒಂದು ವೇಳೆ ಕೊಚ್ಚೆಯ ಕಿರಿಕಿರಿ ಜಾಸ್ತಿಯಾದರೆ ಸ್ವಚ್ಚ ಮಾಡುವುದು ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಕನ್ನಡಿಗಾ ಕರ್ನಾಟಕವನ್ನು ಕೆಣಕುವವರ ಬಗ್ಗೆ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಇಲ್ಲವೆಂದರೆ. ರಾಜಿನಾಮೆ ನೀಡಿ ಮನೆಗೆ ಹೋಗುವುದು ಒಳ್ಳೆಯದು. ಸರ್ವ ಭಾಷಿಗರನ್ನು ಸಮಾನವಾಗಿ ಕಾಣುವವರು ನಾವು. ಕನ್ನಡಿಗರು ಭಾಷೆಯ ವಿರೋಧಿಯಲ್ಲ. ಭಾವನೆಗಳ ಜೊತೆ ಆಟವಾಡುವ, ಭಾಷೆಯ ಹೆಸರಲ್ಲಿ ಬಾಂಧವ್ಯ ಒಡೆಯುವ, ನಮ್ಮ ನೆಲವನ್ನು ತಮ್ಮದೆನ್ನುತ್ತ ಅನ್ಯಾಯ ಮಾಡುವ, ಜನರ ವಿರುದ್ಧ ತಿರುಗಿ ಬೀಳುವವರನ್ನು ಸದೆ ಬಡೆಯುವುದು ರಕ್ತಗತವಾಗಿ ಬಂದಿದೆ ಬೇಕಿದ್ದರೆ ಕರ್ನಾಟಕ ಇತಿಹಾಸವನ್ನೋಮ್ಮೆ ಓದಿ ತಿಳಿಯುತ್ತದೆ. ಇಲ್ಲದೇ ಹೋದಲ್ಲಿ ಇತಿಹಾಸದಲ್ಲಿ ನಡೆದ ಹೋರಾಟಗಳನ್ನು ವಾಸ್ತವದಲ್ಲಿಯೂ ತೋರಿಸಬೇಕಾಗುತ್ತದೆ. ಇನ್ನಾದರೂ ಮಹಾರಾಷ್ಟ್ರ ಸರ್ಕಾರ ಇದನ್ನು ಅರ್ಥಮಾಡಿಕೊಂಡು ಮಹಾಜನ್ ವರದಿಗೆ ತಲೆ ಬಾಗಬೇಕು. ಇಲವೆಂದಲ್ಲಿ ಸಿಕ್ಕಿದ್ದೇ ಶಿವಾಯ ನಮಃ ಎಂದುಕೊಂಡು ಪಾಲಿಗೆ ಬಂದಿದ್ದು ಪಂಚಾಮೃತ ಎನ್ನುವಂತೆ ಸ್ವೀಕರಿಸಬೇಕು. ಅದನ್ನು ಬಿಟ್ಟು ತಮ್ಮ ನೆಲದಲ್ಲಿ ನಿಂತುಕೊಂಡು ನಮ್ಮ ನೆಲದಲ್ಲಿ ತಮ್ಮ ಯೋಜನೆಗಳನ್ನು ಜಾರಿ ಮಾಡುತ್ತೇನೆ. ನಮ್ಮವರನ್ನು ತಮ್ಮರನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೊರಟರೆ ಇರುವಂತ ಸೊಲ್ಲಾಪುರ, ಅಕ್ಕಲಕೋಟೆಯನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಕನ್ನಡಿಗರು ಸಾಧುಗೆ ಸಾಧುವಂ, ಮಾಧುರ್ಯಂಗೆ ಮಾಧುರ್ಯಂ ಬಾದಿಪ್ಪ ಕಲಿಗೆ ಕಲಿಯುಗದ ವಿಪರೀತನ್‌. ಮಹಾರಾಷ್ಟ್ರದವರಿಗೆ ಇದು ಶಬ್ದದಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ ಪ್ರಾಯೋಗಿಕವಾಗಿಯೇ ತೋರಿಸಬೇಕು ಏನಂತಿರಾ?  

- * * * -