ನವದೆಹಲಿ, ನ 9 : ರಾಮಜನ್ಮ ಭೂಮಿ - ಬಾಬರಿ ಮಸೀದಿ ಪ್ರಕರಣದ ತೀಪು ಹೊರಬರುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿ, ಭದ್ರತಾ ಸ್ಥಿತಿಗತಿಗಳ ಪರಾಮರ್ಶಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಗೃಹ ಸಚಿವರ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶಾದ್ಯಂತ ಶಾಂತಿ - ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸಚಿವರು ಸಭೆಯಲ್ಲಿ ವಿವರಿಸಿದರು ಎಂದು ಹೇಳಿದ್ದಾರೆ. ವಿಶೇಷವಾಗಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವಂತೆ ಮುಖ್ಯಮಂತ್ರಿ ಅವರಿಗೆ ಸೂಚನೆ ನೀಡಿದ್ದು ಇದಕ್ಕೆ ಅಗತ್ಯವಾದ ಭದ್ರತಾ ಸಿಬ್ಬಂದಿಯನ್ನು ಕೇಂದ್ರ ಒದಗಿಸಿಕೊಡಲಿದೆ ಎಂದು ಭರವಸೆ ನೀಡಿದ್ದಾರೆ. ಶನಿವಾರದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಿತ್ ಬಲ್ಲಾ, ಗುಪ್ತಚರ ಇಲಾಖೆಯ ನಿರ್ದೇಶಕ ಅರವಿಂದ ಕುಮಾರ್ ಮೊದಲಾದ ಅಧಿಕಾರಿಗಳು ಭಾಗಿಯಾಗಿದ್ದರು.