ಬಿಸಿಯೂಟ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ ಆರಂಭ: ಪ್ರತಿಭಟನೆ ಹತ್ತಿಕ್ಕಲು ಪೊಲೀಸರ ಶತಪ್ರಯತ್ನ

ಬೆಂಗಳೂರು, ಫೆ.3, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ಅಹೋರಾತ್ರಿ ಧರಣಿ ಆರಂಭಿಸಿರುವ ಬಿಸಿಯೂಟ ಕಾರ್ಯಕರ್ತೆಯರು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲೇ ಜಮಾಯಿಸಿ ಅಲ್ಲೇ ಸತ್ಯಾಗ್ರಹ ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರೆ, ಅಲ್ಲಿಂದ ಫ್ರೀಡಂ ಪಾರ್ಕ್‌ಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹಠ ಹಿಡಿದಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳಿಂದ 4000ಕ್ಕೂ ಹೆಚ್ಚು ಅಕ್ಷರ ದಾಸೋಹ ನೌಕರರು ಇಂದು ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿ, ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದಾರೆ. ಎರಡು ದಿನಗಳಿಗೆ ಬೇಕಾಗುವ ರೊಟ್ಟಿ ಚಟ್ನಿ ಪುಡಿಯನ್ನು ಪ್ರತಿಭಟನಕಾರರು ತಂದಿದ್ದು, ಅವರೊಂದಿಗೆ ಮಕ್ಕಳು ಕೂಡ ಆಗಮಿಸಿದ್ದಾರೆ.

ಸಿಐಟಿಯು ಮುಖಂಡೆ ವರಲಕ್ಷ್ಮೀ ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಪೊಲೀಸರು ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇದರಿಂದ ಕಾರ್ಯಕರ್ತೆಯರು ರೈಲ್ವೆ ನಿಲ್ದಾಣದ ಆವರಣದಲ್ಲೇ ಧರಣಿ ಕುಳಿತಿದ್ದಾರೆ. ಇಲ್ಲಿಯೇ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಧ್ಯಕ್ಷೆ ಅನುಪಮಾ ಮಾತನಾಡಿ, ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗಲೂ ಕೇವಲ ಆಶ್ವಾಸನೆ ನೀಡಲಾಗುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ, ಗೌರವ ಇಲ್ಲ. ನಾವೇನು ಬಿಜೆಪಿ ಕಾರ್ಯಕರ್ತರಂತೆ ದುಡ್ಡು ಪಡೆದು ಪ್ರತಿಭಟನೆ ಮಾಡಲು ಬಂದಿಲ್ಲ. ನಮ್ಮ ಕಷ್ಟವನ್ನು ಸರ್ಕಾರಕ್ಕೆ ಹೇಳಿಕೊಳ್ಳಲು ಬಂದಿದ್ದೇವೆ ಎಂದರು ಹರಿಹಾಯ್ದರು.

ನಮ್ಮ ಸಂಘಟನೆಯ ಅಧ್ಯಕ್ಷೆ  ವರಲಕ್ಷ್ಮೀ ಅವರನ್ನು ಪೊಲೀಸರು ಬಂಧಿಸಿ ಇಟ್ಟಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ನಮಗೆ ನೀಡುತ್ತಿರುವ 2700 ರೂ. ವೇತನ ಸಾಕಾಗುತ್ತಿಲ್ಲ. 17 ವರ್ಷಗಳ ಕಾಲ ಸೇವೆ ಮಾಡಿದ್ದೇವೆ, ಈಗ ನಮಗೆ 60 ವರ್ಷವಾಗುತ್ತಾ ಬಂದಿದೆ. ನಿವೃತ್ತಿಯಾಗುವಾಗ ಯಾವ ಸೌಲಭ್ಯವೂ ಸಿಗದೆ ಬರಿಗೈಯಲ್ಲಿ ಮನೆಗೆ ಹೋಗಬೇಕು. ಈ ಮಧ್ಯೆ ಬಿಸಿಯೂಟವನ್ನು ಖಾಸಗೀಕರಣ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ಇವುಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಎಲ್ಲಾ ಬೇಡಿಕೆ ಈಡೇರುವವರೆಗೂ ಇಲ್ಲೇ ಕುಳಿತು ಪ್ರತಿಭಟನೆ ಮಾಡುತ್ತೇವೆ. ಉಪವಾಸ ಸತ್ಯಾಗ್ರಹ ನಡೆಸಲೂ ಸಿದ್ಧವಿದ್ದೇವೆ. ಎಷ್ಟು ಬಲಿ ಬೇಕಾದರೂ ರಾಜ್ಯ ಬಿಜೆಪಿ ಸರ್ಕಾರ ಪಡೆಯಲಿ ಎಂದು ಸವಾಲು ಹಾಕಿದರು.

ಶತಾಯಗತಾಯ ಪ್ರತಿಭಟನೆಯನ್ನು ಹತ್ತಿಕ್ಕಬೇಕು ಎಂದು ನಿರ್ಧರಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್‌ ಪ್ರತಿಭಟನೆಗೆ ನೀಡಿದ್ದ ಅನುಮತಿ ಹಿಂಪಡೆದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಮಾತ್ರವಲ್ಲ ಎಲ್ಲಾ ಜಿಲ್ಲಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಅಧೀಕ್ಷಕರಿಗೆ ಪತ್ರ ಬರೆದು, ಪ್ರತಿಭಟನಕಾರರು ಬೆಂಗಳೂರಿಗೆ ಬಾರದಂತೆ ತಡೆಯಲು ಕೋರಿದ್ದಾರೆ. ಅದರಂತೆ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಪ್ರತಿಭಟನಕಾರರನ್ನು ತಡೆಯುತ್ತಿದ್ದಾರೆ. ಪೊಲೀಸ್ ಆಯುಕ್ತರ ಪತ್ರಕ್ಕೆ ಸಾರ್ವಜನಿಕ ಮತ್ತು ರಾಜಕೀಯ ವಲಯದಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ.ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರನ್ನು ಮಹಾಲಕ್ಷ್ಮೀ ಲೇಔಟ್ ಸಿಐಟಿಯು ಕಚೇರಿಯಿಂದ ವಶಕ್ಕೆ ಪಡೆದಿದ್ದಾರೆ. ಉಪ್ಪಾರಪೇಟೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. 

ಪ್ರತಿಭಟನೆ ಹಿನ್ನೆಲೆಯಲ್ಲಿ 2 ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.  ಯಾವುದೇ ಕಾರಣಕ್ಕೂ ರೈಲ್ವೇ ನಿಲ್ದಾಣ ಬಿಟ್ಟು ತೆರಳದಂತೆ ಪೊಲೀಸರು ಸೂಚಿಸಿದ್ದಾರೆ. ಓರ್ವ ಡಿಸಿಪಿ, 3 ಜನ ಎಸಿಪಿ, 12 ಪಿಎಸ್ ಐ ಸೇರಿದಂತೆ 1100 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಗೆ ಅವಕಾಶವಿಲ್ಲ: ರಮೇಶ್ ಬಾನೋತ್ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರಿಗೆ ನಗರದಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಫ್ರೀಡಂ ಪಾರ್ಕ್ ನಲ್ಲಿ ಜಾಸ್ತಿ ಜನರು ಸೇರಿದರೆ ರಕ್ಷಣೆ ನೀಡಲು ಸಮಸ್ಯೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಧರಣಿಗೆ ಅವಕಾಶವಿಲ್ಲ ಎಂದು ತಿಳಿಸಿದರು. ಮೆಜೆಸ್ಟಿಕ್ ಕೆಎಸ್ ಆರ್ ರೈಲು ನಿಲ್ದಾಣದಲ್ಲಿ ಪ್ರತಿಭಟನಾನಿರತರನ್ನು ಅಲ್ಲಿಯೇ ತಡೆಯುತ್ತೇವೆ. ರೈಲು ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.  ಒಟ್ಟಿನಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.