ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ

Launch of the Advanced Agriculture Resolution Campaign

ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ 

ಲಕ್ಷ್ಮೇಶ್ವರ  19 : ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ “ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025” ದ ಶೀರ್ಷಿಕೆಯೊಂದಿಗೆ 15 ದಿನಗಳ ಮುಂಗಾರು ಪೂರ್ವ ಸಿದ್ಧತಾ ಅಭಿಯಾನಕ್ಕೆ ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ತಾರಾಮಣಿ ಜಿ.ಎಚ್‌. ಚಾಲನೆ ನೀಡಿದರು. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ನಾಲ್ಕು ಗ್ರಾಮಗಳಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಅಭಿಯಾನವನ್ನು ಪ್ರಾರಂಭಿಸಲಾಯಿತು. ಮುಂಗಾರು ಬೆಳೆಗಳ ಬಿತ್ತನೆಗೂ ಪೂರ್ವದಲ್ಲಿ ಕೈಗೊಳ್ಳಬೇಕಾದ ಮಣ್ಣು ಪರೀಕ್ಷೆ, ಭೂಮಿ ಸಿದ್ಧತೆ, ಬೀಜೋಪಚಾರ, ಬೀಜ ಮತ್ತು ಗೊಬ್ಬರಗಳ ಆಯ್ಕೆ, ನೈಸರ್ಗಿಕ ಕೃಷಿ, ತೋಟಗಾರಿಕೆ ಬೆಳೆಗಳು, ಕೃಷಿ ಯಾಂತ್ರೀಕರಣ ಇತ್ಯಾದಿ ವಿಷಯಗಳ ಕುರಿತು ಚರ್ಚಾಗೋಷ್ಠಿಗಳನ್ನು ಏರಿ​‍್ಡಸಲಾಯಿತು.ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಮತ್ತು ಗೊಜನೂರು ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಸಭೆಗಳಲ್ಲಿ ಹಿರಿಯ ಪ್ರಗತಿಪರ ರೈತರಾದ ಶ್ರೀ ಸಿ.ಟಿ. ಹಳೆಮನಿ ಇವರು ರೈತ ಬಾಂಧವರು ರಾಸಾಯನಿಕ ಕೃಷಿಯನ್ನು ಕಡಿಮೆ ಮಾಡಿ ಸಾವಯವ ಕೃಷಿಯೆಡೆಗೆ ಒಲವು ತೋರಿಸಬೇಕು ಎಂದು ಅಭಿಪ್ರಾಯ ಪಟ್ಟರು. ಭಾರತೀಯ ಕಿಸಾನ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಗೊಜನೂರು ಗ್ರಾಮದ ಪ್ರಗತಿಪರ ರೈತರಾದ ಶ್ರೀ ಚನ್ನಪ್ಪ ಷಣ್ಮುಖಿಯವರು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳ ನಿಕಟ ಸಂಪರ್ಕದಿಂದ ರೈತರು ಉಪಯುಕ್ತ ತಾಂತ್ರಿಕ ಮಾಹಿತಿ ಪಡೆದು ಹೆಚ್ಚಿನ ಲಾಭ ಪಡೆಯಬೇಕು ಎಂದು ಕರೆ ನೀಡಿದರು. ಉಪ ಕೃಷಿ ನಿರ್ದೇಶಕಿ, ಶ್ರೀಮತಿ ಸ್ಪೂರ್ತಿ ಜಿ.ಎಸ್‌. ಇವರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀ ಶಿವಾನಂದ ಬಾನಿ, ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ವಿವಿಧ ಸವಲತ್ತುಗಳ ಕುರಿತು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯ ವಿಜ್ಞಾನಿಗಳು ಮಣ್ಣು ಪರೀಕ್ಷೆಯ ಮಹತ್ವ, ಬೀಜೋಪಚಾರ, ಮುಂಗಾರು ಹಂಗಾಮಿನಲ್ಲಿ ಅಳವಡಿಸಿಕೊಳ್ಳಬೇಕಾದ ವಿವಿಧ ತಂತ್ರಜ್ಞಾನಗಳು, ಮಳೆ ನೀರಿನ ನಿರ್ವಹಣೆ, ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧನೆಯ ಕುರಿತಂತೆ ಐ.ಸಿ.ಎ.ಆರ್‌-ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯ ವಿಜ್ಞಾನಿಗಳಾದ ಡಾ.ಸುಧಾ ಮಂಕಣಿ, ಮುಖ್ಯಸ್ಥರು, ಡಾ. ವಿನಾಯಕ ನಿರಂಜನ (ಕೃಷಿ ಇಂಜಿನಿಯರಿಂಗ್) ಹಾಗೂ ಡಾ. ವೆಂಕಟರವಣ ನಾಯಕ (ಬೇಸಾಯ ಶಾಸ್ತ್ರ) ಇವರು ವಿವರಿಸಿದರು. ಕೃಷಿ ಅಧಿಕಾರಿ        ಶ್ರೀ ಚಂದ್ರಶೇಖರ ನರಸಮ್ಮನವರ್, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ರೈತ ಮುಖಂಡರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು. ಕೃಷಿ ಇಲಾಖೆಯ ಕೃಷಿ ಸಂಜೀವಿನಿ ವಾಹನದ ಮೂಲಕ ಗ್ರಾಮಗಳಲ್ಲಿ ಅಭಿಯಾನದ ಕುರಿತು ಅರಿವು ಮೂಡಿಸಲಾಯಿತು.  ಮಣ್ಣು ಪರೀಕ್ಷೆ, ಜಲ ಸಂಜೀವಿನಿ, ಬೀಜೋಪಚಾರ, ಸಾವಯವ ಕೃಷಿ, ಸಿರಿಧಾನ್ಯಗಳ ಪೌಷ್ಠಿಕತೆ ಕುರಿತು ಹಸ್ತ ಪ್ರತಿಗಳನ್ನು ರೈತರಿಗೆ ವಿತರಿಸಲಾಯಿತು.ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಹಾಗೂ ಮಾಚೇನಹಳ್ಳಿ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಹಾಯಕ ಕೃಷಿ ಅಧಿಕಾರಿ ಶ್ರೀ ರೇವಣಪ್ಪ ಮನಗುಳಿ ಇವರು ಭಾಗವಹಿಸಿ, ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯ ವಿಜ್ಞಾನಿಗಳು ಮುಂಗಾರು ಹಂಗಾಮಿನ ಕೃಷಿ ಬೆಳೆಗಳ ತಂತ್ರಜ್ಞಾನಗಳು, ಒಣಬೇಸಾಯದಲ್ಲಿ ತೋಟಗಾರಿಕೆಯ ಮಹತ್ವ ಹಾಗೂ ರೈತ ಉತ್ಪಾದಕ ಸಂಘಗಳ ಕುರಿತು ಮಾಹಿತಿ ಹಂಚಿಕೊಂಡರು. ಬೀಜೋಪಚಾರ ವಿಧಾನದ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು. ಶಿರಹಟ್ಟಿಯ ಕೃಷಿ ಅಧಿಕಾರಿ ಶ್ರೀ ಎಸ್‌.ಬಿ.ಲಮಾಣಿ ಹಾಗೂ ಬಿ.ಟಿ.ಎಮ್ ಶ್ರೀ ಎಮ್‌.ಎಸ್‌.ಪೂಜಾರ, ಮಾಚೇನಹಳ್ಳಿ ಹಾಗೂ ಬೆಳ್ಳಟ್ಟಿ ಗ್ರಾಮಗಳ ಪ್ರಗತಿಪರ ರೈತರು, ರೈತ ಮಹಿಳೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.