ಬೆಂಗಳೂರು, ಏ. 4,ಕೋವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರ ರಾಜ್ಯದಿಂದ ಬರುವ ಪ್ರಯಾಣಿಕ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸರಕು ಸಾಗಣೆ ವಾಹನಗಳ ಮತ್ತು ದಿನ ನಿತ್ಯಕ್ಕೆ ಬೇಕಾದ ವಸ್ತುಗಳ ಸರಾಗ ಸಾಗಾಟಕ್ಕೆ ಯಾವುದೇ ಅಡೆ-ತಡೆ ಇಲ್ಲದೆ ಸಾಗಣೆ ಮಾಡಲು ಸಾರಿಗೆ ಇಲಾಖೆಯಿಂದ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.ಕರ್ನಾಟಕದಲ್ಲಿರುವ ಎಲ್ಲಾ ಸಾರಿಗೆ ಕಚೇರಿಗಳ ನಿರಂತರ ಸಂಪರ್ಕ ಹೊಂದಲು ಮತ್ತು ಅಲ್ಲಿಂದ ತುರ್ತು ಮಾಹಿತಿಗಳನ್ನು ಪಡೆಯಲು ವಿಶೇಷ ಸಹಾಯವಾಣಿ ಹಾಗೂ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ) ಯನ್ನು 24X7 ಮಾದರಿಯಲ್ಲಿ ತೆರೆಯಲಾಗಿದೆ.
ದಿನನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳ ನಿರಂತರ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಂಘ ಸಂಸ್ಥೆ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ರವಾನಿಸಿಸೂಕ್ತ ಕ್ರಮ ಜರುಗಿಸಲು ಈ ವ್ಯವಸ್ಥೆ ಅನುಕೂಲಕರವಾಗಿರುತ್ತದೆ.ಅಷ್ಟೇ ಅಲ್ಲ ಸಾರ್ವಜನಿಕರಿಗೆ ಅಗತ್ಯವಾಗಿರುವ ಅಗತ್ಯ ವಸ್ತುಗಳು ಕೊರತೆಯಾಗದಂತೆ ವಾಹನಗಳನ್ನು ಒದಗಿಸಲು ಸೂಕ್ತ ಕ್ರಮವಹಿಸಲಾಗುವುದು. ಇವಲ್ಲದೇ ಸಾರಿಗೆ ವಲಯದ ಸಮಸ್ಯೆಗಳಿಗೂ ಇದರಿಂದ ಪರಿಹಾರ ಪಡೆದುಕೊಳ್ಳಬಹುದು.ಸಹಾಯವಾಣಿ - ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ದೂರವಾಣಿ ಸಂಖ್ಯೆ:080-22236698 ಮತ್ತು ಮೊಬೈಲ್ ಸಂಖ್ಯೆ: 9449863214 ಕಚೇರಿಗೆ ಸಂಪರ್ಕಿಸಬಹುದಾಗಿದ್ದು ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿ ಕೊಳ್ಳಲು ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿ
ಲಕ್ಷ್ಮಣ ಸವದಿ ಕರೆ ನೀಡಿದ್ದಾರೆ.