ಲಾರಾಗೆ ಬೌಲಿಂಗ್‌ ಮಾಡಲು ಹೆದರುತ್ತಿದ್ದೆ: ಶಾಹಿದ್‌ ಅಫ್ರಿದಿ

ನವದೆಹಲಿ, ಏ 22,ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಹಲವು ವರ್ಷಗಳ ಕಾಲ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಹೊಂದಿದ್ದ ಪಾಕಿಸ್ತಾನ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ, ತಮ್ಮ ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ ಮೂಲಕವೇ ಪಾಕ್‌ಗೆ ಹೆಚ್ಚು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.ಲೆಗ್‌ ಸ್ಪಿನ್ನರ್‌ ಆದರೂ ಚೆಂಡಿನಲ್ಲಿ ಹೆಚ್ಚು ತಿರುವು ತರದ ಅಫ್ರಿದಿ ಗತಿಯಲ್ಲಿ ಬದಲಾವಣೆ ತಂದು ಹೆಚ್ಚು ವೇಗವಾಗಿ ಬೌಲ್‌ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗುತ್ತಿದ್ದರು. ಅಂದಹಾಗೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಎದುರು ಆತ್ಮವಿಶ್ವಾಸದಿಂದಲೇ ಬೌಲಿಂಗ್‌ ಮಾಡುತ್ತಿದ್ದ ಅಫ್ರಿದಿ, ತಮ್ಮ ವೃತ್ತಿ ಬದುಕಿನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ ಎದುರು ಮಾತ್ರ ಬೌಲಿಂಗ್‌ ಮಾಡಲು ಹೆದರುತ್ತಿದ್ದರಂತೆ.ವಿಶ್ವ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ಎದುರು ಬೌಲಿಂಗ್‌ ಮಾಡಲು ಸದಾ ಹೆದರುತ್ತಿದ್ದುದ್ದಾಗಿ ವಿಸ್ಡನ್‌ ಕ್ರಿಕೆಟ್‌ಗೆ ನೀಡಿರುವ ಸಂದರ್ಶನದಲ್ಲಿ ಅಫ್ರಿದಿ ಹೇಳಿದ್ದಾರೆ
"ನಾನು ಬೌಲಿಂಗ್‌ ಮಾಡಲು ಹೆದರುತ್ತಿದ್ದ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಲಾರಾ. ಅವರನ್ನು ಕೆಲ ಬಾರಿ ಔಟ್‌ ಮಾಡಿದ್ದೇನೆ ನಿಜ. ಆದರೆ ಅವರಿಗೆ ಬೌಲಿಂಗ್‌ ಮಾಡುವಾಗ ಸದಾ ಹೆದರುತ್ತಿದ್ದೆ. ನನ್ನ ಮುಂದಿನ ಎಸೆತದಲ್ಲಿ ಅವರು ಬೌಂಡರಿ ಬಾರಿಸುತ್ತಾರೆ ಎಂಬ ಭಯ ಸದಾ ಕಾಡುತ್ತಿತ್ತು. ನನ್ನ ಮೇಲೆ ಅವರು ಅಷ್ಟು ಪ್ರಭಾವ ಬೀರಿದ್ದರು. ಅವರೆದುರು ನಾನು ಎಂದೂ ಆತ್ಮವಿಶ್ವಾಸದಿಂದ ಬೌಲಿಂಗ್‌ ಮಾಡಿಲ್ಲ," ಎಂದಿದ್ದಾರೆ.