ನವದೆಹಲಿ, ಫೆ 11,ಕಳೆದ 2018ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ್ದ ಭಾರತ ಮಹಿಳಾ ಹಾಕಿ ತಂಡದ ಸ್ಟ್ರೈಕರ್ ಲಾಲ್ರೆಸಿಯಾಮಿ ಅವರು 2019ರ ವರ್ಷದ ಎಫ್‌ಐಎಚ್ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019ರಲ್ಲಿ ನಡೆದಿದ್ದ ಹಾಕಿ ಸೀರಿಸ್ ಫೈನಲ್ಸ್ ಹಿರೋಶಿಮಾ ಗೆದ್ದ ಭಾರತ ತಂಡದಲ್ಲಿದ್ದ ಲಾಲ್ರೆಸಿಯಾಮಿ ಗಮನಾರ್ಹ ಪ್ರದರ್ಶನ ತೋರಿದ್ದರು. ಅಲ್ಲದೆ, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತದ ಪರ ಲಾಲ್ರೆಸಿಯಾಮಿ ಪ್ರಧಾನ ಪಾತ್ರ ವಹಿಸಿದ್ದರು. ಆ ಮೂಲಕ ಭಾರತ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಸಂಪಾದಿಸಿತ್ತು.ಈ ಪ್ರಶಸ್ತಿ ಪೈಪೋಟಿಯಲ್ಲಿ ಅರ್ಜೆಂಟೀನಾದ ಜೂಲಿಯಟ್ ಜಂಕುನಾಸ್, ಚೀನಾದ ಜಾಂಗ್ ಜಿಯಾಂಕಿ ಹಾಗೂ ನೇದರ್‌ಲೆಂಡ್‌ನ ಫ್ರೆಡ್ರಿಕ್ ಮಾಟ್ಲಾ ಇದ್ದರು. ಆದರೆ, ಅಂತಿಮವಾಗಿ ಭಾರತದ ಸ್ಟ್ರೈಕರ್‌ಗೆ ಈ ಪ್ರಶಸ್ತಿ ಲಭಿಸಿತು.
"ಈ ಪ್ರಶಸ್ತಿ ಲಭಿಸಿರುವುದು ನನಗೆ ಹೆಚ್ಚು ಗೌರವ ತಂದಿದೆ. ಇಂದು ನನಗೆ ಒಂದು ದೊಡ್ಡ ಕ್ಷಣವಾಗಿದೆ ಮತ್ತು ಈ ಪ್ರಶಸ್ತಿಯನ್ನು ಗೆಲ್ಲಲು ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ನನಗೆ ಈ ಪ್ರಶಸ್ತಿ ದೊಡ್ಡ ಪ್ರೇರಣೆಯಾಗಿದೆ. ತಂಡದಲ್ಲಿ ನನ್ನ ವೈಯಕ್ತಿಕ ಪ್ರದರ್ಶನಕ್ಕೆ ಸಹಕಾರ ನೀಡಿದ ಸಹ ಆಟಗಾರ್ತಿಯರಿಗೂ ಧನ್ಯವಾದ ಹೇಳಲು ನಾನು ಬಯಸುತ್ತೇನೆ,'' ಎಂದು ಬ್ಯೂನಸ್ ಐರಿಸ್‌ನಲ್ಲಿ 2018 ರ ಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತ 19 ವಯೋಮಿತಿ ತಂಡದಲ್ಲಿದ್ದ ಲಾಲ್ರೆಸಿಯಾಮಿ ಹೇಳಿದ್ದಾರೆ.