ನವದೆಹಲಿ, ನ 12 : ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ ಸಖ್ಯವನ್ನು ಶಿವಸೇನೆ ಕಡಿದುಕೊಂಡು ಹೊರಬಂದಿರುವಾಗಲೇ ಬಿಜೆಪಿಯ ದೊಡ್ಡಣ್ಣನ ನೀತಿಯನ್ನು ಸಹಿಸಲಾಗದು ಎಂದು ಲೋಕಜನಶಕ್ತಿ ಪಾರ್ಟ್ ತಿರುಗಿಬಿದ್ದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿ ಸಂಬಂಧ ಮುರಿದುಕೊಂಡು ದೂರವಾಗಿರುವ ಕ್ರಮವನ್ನು ಎಲ್ ಜೆ ಪಿ ಅಧ್ಯಕ್ಷ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಪ್ರಶಂಸೆ ಮಾಡಿದ್ದಾರೆ. ಬಿಜೆಪಿಯ ದೊಡ್ಡಣ್ಣನ ಕಾರ್ಯನೀತಿಯನ್ನು, ನಡವಳಿಕೆಯನ್ನು ಬಹಳಕಾಲ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಬಿಜೆಪಿಯ ಉನ್ನತ ನಾಯಕರು ಇದನ್ನು ಅರ್ಥಮಾಡಿಕೊಂಡು ಮಿತ್ರಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕು ಎಂದು ಅವರು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಮಗೆ ಆರು ಸೀಟುಗಳನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿಕೊಂಡಿದ್ದರೂ, ಬಿಜೆಪಿ ಯಾವುದೇ ರೀತಿ ಸ್ಪಂದನೆ ಮಾಡುತ್ತಿಲ್ಲ. ಇಂತಹ ವರ್ತನೆಯನ್ನು ನಾವು ಬಿಜೆಪಿಯಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಒಂದು ವೇಳೆ ಬಿಜೆಪಿ, ತಮ್ಮ ಬೇಡಿಕೆಯನ್ನು ಒಪ್ಪದೇ ಹೋದಲ್ಲಿ ಎಲ್ ಜೆ ಪಿ, ಜಾರ್ಖಂಡ್ ವಿಧಾನಸಭಾ ಚುನಾವಣೆಯ 37 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.